ವಾರಾಂತ್ಯ ಕರ್ಫ್ಯೂ ರದ್ದು: ಮಡಿಕೇರಿಯಲ್ಲಿ ಪ್ರವಾಸಿಗರ ದಂಡು
ಮಡಿಕೇರಿ ಸೆ.11 : ರಾಜ್ಯ ಸರಕಾರದ ಆದೇಶದಂತೆ ಕೊಡಗು ಜಿಲ್ಲೆಯಲ್ಲಿದ್ದ ವೀಕೆಂಡ್ ಕರ್ಫ್ಯೂ ರದ್ದುಗೊಂಡಿದೆ. ಇದರ ಬೆನ್ನಲ್ಲೇ ಕೊಡಗಿನೆಡೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಬಾಗಿಲು ಹಾಕಿಕೊಳ್ಳುತ್ತಿದ್ದ ಪ್ರವಾಸಿತಾಣಗಳಲ್ಲಿ ಇದೀಗ ಪ್ರವಾಸಿಗರೇ ತುಂಬಿದ್ದು, ಪ್ರವಾಸೋದ್ಯಮದಲ್ಲಿ ತುಸು ಚೇತರಿಕೆ ಕಂಡು ಬಂದಿದೆ.
ದುಬಾರೆ, ಕಾವೇರಿ ನಿಸರ್ಗ ಧಾಮ, ಮಡಿಕೇರಿ ರಾಜಾಸೀಟು, ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ಕೋಟೆ ಬೆಟ್ಟ, ಮಲ್ಲಳ್ಳಿ ಜಲಪಾತಗಳ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಿದ್ದಾರೆ. ಇದೀಗ ಮಳೆ ಕೂಡ ಇಳಿಕೆಯಾಗಿರುವ ಕಾರಣ ಮಳೆ ಅವಾಂತರದ ಆತಂಕವೂ ದೂರವಾಗಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನ ಕಡೆ ಧಾವಿಸುತ್ತಿದ್ದಾರೆ. ರೆಸಾರ್ಟ್‍ಗಳು, ಹೋಂ ಸ್ಟೇಗಳು, ಲಾಡ್ಜ್‍ಗಳು ಪ್ರವಾಸಿಗರಿಂದ ತುಂಬಿದೆ. ವಾರಾಂತ್ಯದ ಸಾಲು ರಜೆ ಇರುವುದು ಕೂಡ ಪ್ರವಾಸಿಗರಿಗೆ ಅನುಕೂಲವಾಗಿದ್ದು, ಇಲ್ಲಿನ ಮಂಜು ಮುಸುಕಿದ ಚಳಿಯ ವಾತಾವರಣದಲ್ಲಿ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.
ವೀಕೆಂಡ್ ಕಫ್ರ್ಯೂ ರದ್ದಾಗಿರುವುದು ಮತ್ತು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿರುವ ಕಾರಣ ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದವರಿಗೆ ತುಸು ನಿರಾಳವಾಗಿದೆ. ಪ್ರವಾಸಿತಾಣಗಳಿಗೆ ತೆರಳುವ ಜೀಪುಗಳು, ಟ್ಯಾಕ್ಸಿಗಳು, ಸುತ್ತ ಮುತ್ತಲಿನ ಅಂಗಡಿಗಳು, ಸ್ಪೈಸಸ್ ಮಳಿಗೆಗಳು ಮತ್ತು ಪ್ರವಾಸೋದ್ಯಮ ಅವಲಂಬಿ ಉದ್ಯಮಗಳಲ್ಲಿ ಹೊಸ ಆಶಾ ಭಾವನೆ ಮೂಡಿದೆ.
ಆದರೆ ಸ್ಥಳೀಯ ಕೆಲವು ಸಂಘಟನೆಗಳು ಕೋವಿಡ್ ಆತಂಕದ ಹಿನ್ನೆಲೆ ಪ್ರವಾಸಿಗರ ಆಗಮನವನ್ನು ವಿರೋಧಿಸುತ್ತಿವೆ. ಅಲ್ಲದೆ ಜಿಲ್ಲೆಯ ಜನರ ಹಿತ ದೃಷ್ಟಿಯಿಂದ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸುತ್ತಿವೆ.