×
Ad

ಸೆ.14ರ ಹಿಂದಿ ದಿವಸ್ ವಿರೋಧಿಸಿ ಕರಾಳ ದಿನಾಚರಣೆ: ವಾಟಾಳ್ ನಾಗರಾಜ್

Update: 2021-09-11 22:47 IST

ಬೆಂಗಳೂರು, ಸೆ. 11: `ಕೇಂದ್ರ ಸರಕಾರ ಸೆ.14ಕ್ಕೆ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಅಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆ ಆಚರಿಸುವ ಮೂಲಕ ಹಿಂದಿ ದಿವಸ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

`ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಿಗರಿಗೆ ಕನ್ನಡವೇ ರಾಷ್ಟ್ರೀಯ ಭಾಷೆ. ಭಾಷೆ ವಿಚಾರದಲ್ಲಿ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುವುದನ್ನು ಕೇಂದ್ರ ಸರಕಾರ ಕೂಡಲೇ ಕೈಬಿಡಬೇಕು. ಒಕ್ಕೂಟ ವ್ಯವಸ್ಥೆಯನ್ನು ಯಾವುದೇ ಒಂದು ಭಾಷೆ ಮಾತ್ರವೇ ಶ್ರೇಷ್ಠವಾಗಲು ಸಾಧ್ಯವೇ ಇಲ್ಲ. ಹಿಂದಿ ದಿವಸ್ ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು' ಎಂದು ವಾಟಾಳ್ ನಾಗರಾಜ್ ಗುಡುಗಿದರು.

`ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿ ಭಾಷೆಯನ್ನು ಇತರೆ ಜನರ ಮೇಲೆ ಹೇರಿಕೆ ಮಾಡಲು ಕೇಂದ್ರ ಸರಕಾರ ಹೊರಟಿದೆ. ಹಿಂದಿ ದರ್ಬಾರ್‍ನಿಂದ ಕನ್ನಡಕ್ಕೆ ಅಪಾಯವಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಭಾಷೆ ಅಸ್ಮಿತೆಗೆ ಧಕ್ಕೆಯಾಗಲಿದೆ. ಅದಕ್ಕಾಗಿ ಇದನ್ನು ವಿರೋಧಿಸಿ ಸೆ.14ರಂದು ನಾವು ಹೋರಾಟ ಮಾಡುತ್ತೇವೆ. ನಮ್ಮ ಹೋರಾಟ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಆಗುವುದಿಲ್ಲ' ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

`ಹಿಂದಿ ಹೇರಿಕೆ ವಿರೋಧಿಸಿ ಹಿಂದೆಯೂ ಹೋರಾಟ ಮಾಡಿದ್ದೇವೆ, ಮುಂದೆಯೂ ಹೋರಾಟ ಮಾಡುತ್ತೇವೆ. ಕರ್ನಾಟಕ ಬ್ಯಾಂಕುಗಳು, ರೈಲ್ವೆ, ಅಂಚೆಕಚೇರಿ, ಖಾಸಗಿ ಕಂಪೆನಿ ಹಾಗೂ ಎಲ್ಲ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕು. ಪರಭಾಷೆ ಹೇರಿಕೆಯನ್ನು ಕೇವಲ ಕನ್ನಡಪರ ಸಂಘಟನೆಗಳು ವಿರೋಧ ಮಾಡಿದರೆ ಸಾಲದು. ನಾಡಿನ ಎಲ್ಲರೂ ವಿರೋಧಿಸಿ ಕನ್ನಡ ಭಾಷೆಯನ್ನು ಎತ್ತಿಹಿಡಿಯಬೇಕು' ಎಂದು ಅವರು ಸಲಹೆ ಮಾಡಿದರು.

ಕನ್ನಡ ಪ್ರಾತಿನಿಧಿಕ ಸಂಸ್ಥೆಗಳಾಗಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ವಿವಿಧ ಪ್ರಾಧಿಕಾರಿಗಳು ಈ ಕುರಿತು ಯಾವುದೇ ಹೋರಾಟ ಮಾಡದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ವಾಟಾಳ್ ನಾಗರಾಜ್, ಕನ್ನಡ ಭಾಷೆಯ ಆಸ್ಮಿತೆ ಉಳಿಸಲು ಎಲ್ಲರೂ ಹೋರಾಟ ಮಾಡುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News