ಯಾರೋ ಏನೋ ಹೇಳುತ್ತಾರೆ ಎಂದು ಯಾರನ್ನೋ ತಂದು ಜೈಲಿಗೆ ಹಾಕಲು ಆಗುತ್ತಾ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-09-11 17:50 GMT
ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ಡ್ರಗ್ಸ್ ಸೇವನೆ ನಿಯಂತ್ರಣ ಮಾಡಲು ಸಾರ್ವಜನಿಕರು ಪೊಲೀಸ್ ಇಲಾಖೆ ಜೊತೆ ಕೈಜೋಡಿಸಬೇಕು ಎಂದು‌ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಶನಿವಾರ  ಮಂಗಳೂರು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.ಪೊಲೀಸರು ಏನು ವಿಚಾರಣೆ ಮಾಡಿದ್ದಾರೆ, ಏನು ಫಲಿತಾಂಶ ಬಂದಿದೆ ಎನ್ನುವ ಬಗ್ಗೆ ಕೇಸ್ ಬಿಲ್ಡ್ ಆಗುತ್ತದೆ. ಹೀಗಾಗಿ ಯಾರೋ ಏನೋ ಹೇಳುತ್ತಾರೆ ಎಂದು ಯಾರು ಯಾರನ್ನೋ ತಂದು ಜೈಲಿಗೆ ಹಾಕಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಪೊಲೀಸರು ಸೆಲೆಬ್ರಿಟಿಗಳನ್ನೇ ಜೈಲಿಗೆ ಹಾಕುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳನ್ನು ಅವರ ಬೆನ್ನ ಹಿಂದೆ ಬಿಟ್ಟಿದ್ದೇವೆ ಎಂದ ಅವರು, ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದೇವೆ. ಬೇಕಿದ್ದಲ್ಲಿ ವಿಶೇಷ ಪ್ರಾಸಿಕ್ಯೂಟರ್ ನೇಮಕ ಮಾಡುವ ಕೆಲಸ ನಡೆಯುತ್ತದೆ ಎಂದರು.

ಡ್ರಗ್ಸ್ ಮಾಫಿಯಾ ತುಂಬ ದೊಡ್ಡದು. ಬಹಳ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.ನಮ್ಮ ಪೊಲೀಸರು ಟನ್ ಗಟ್ಟಲೆ ಹಿಡಿದಿದ್ದಾರೆ.ಅದನ್ನೆಲ್ಲಾ ಬಿಟ್ಟಿದ್ದರೆ, ನಮ್ಮ ಯುವ ಜನರು ಏನು ಆಗುತ್ತಿದ್ದರೋ ಗೊತ್ತಿಲ್ಲ.ಡ್ರಗ್ಸ್ ಸೇವನೆ ಮಾಡುವುದನ್ನು ನಿಯಂತ್ರಣ ಮಾಡಬೇಕಿದೆ.ಈ ವಿಚಾರದಲ್ಲಿ ಪೊಲೀಸರ ಜೊತೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಡ್ರಗ್ಸ್ ಪ್ರಕರಣವನ್ನು ಮೆಟ್ಟಿ ನಿಲ್ಲಬೇಕು. ನಮ್ಮ ರಾಜ್ಯ ಆರೋಗ್ಯವಂತ ರಾಜ್ಯವಾಗಬೇಕು ಎಂದ ಅವರು,ಶಿವಮೊಗ್ಗದ ಭಾಗದಲ್ಲಿ ಗಾಂಜಾ ಬೆಳೆಯುವ ಕೆಲಸ ನಡೆಯುತ್ತಿದೆ.ಕಾಲೇಜು ವಿದ್ಯಾರ್ಥಿಗಳನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ.ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.ಇರುವ ಕಾಯ್ದೆಯಲ್ಲಿಯೇ ಅವರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದರು.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು,ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹಾಗೂ ಅವರ ಪೋಷಕರು ದೂರು ನೀಡಲು ಮನವೊಲಿಸಲಾಗುತ್ತಿದೆ ಎಂದರು.

ಅಧಿವೇಶನ ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಸಂತೋಷ ಆಗುತ್ತೆ, ಮತ್ತೊಂದು ಹೊಣೆಗಾರಿಕೆ ಇದೆ. ಸಚಿವನಾಗಿ ಇದು ಮೊದಲ ಅಧಿವೇಶನ. ಇದುವರೆಗೆ ಸದನದಲ್ಲಿ ಕುಳಿತು ಕೇಳುತ್ತಿದ್ದೆ. ಈಗ ಹೇಳುವಂತಹ ಸ್ಥಾನದಲ್ಲಿ ಕುಳಿತಿದ್ದೇನೆ. ಮೊದಲ ಅಧಿವೇಶನ ಎದುರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಜೊತೆಗೆ ಸಿಎಂ ಬೊಮ್ಮಾಯಿ‌, ಯಡಿಯೂರಪ್ಪ ಅವರಿದ್ದಾರೆ. ನನಗೆ ಎಲ್ಲಾ ಸಲಹೆ ಸಹಕಾರ ನೀಡುತ್ತಾರೆ. ಅಧಿಕಾರ ವಹಿಸಿಕೊಂಡ ಕೆಲವೇ  ದಿನದಲ್ಲಿ ನಾನು ಪೊಲೀಸ್ ಇಲಾಖೆ ಅರ್ಥ ಮಾಡಿಕೊಂಡಿದ್ದೇನೆ.ಖಂಡಿತವಾಗಿ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದರು.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ‌ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ಅವರ ಕೆಲಸ ಜನರ ಮನಸ್ಸಿನಲ್ಲಿ ಉಳಿಯುತ್ತದೆ.ಅದರ ಜೊತೆಗೆ ಯಡಿಯೂರಪ್ಪ ಇದ್ದಾರೆ. ಇಬ್ಬರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News