ದೇವಾಲಯದ ಧ್ವಂಸ: ಬಿಜೆಪಿಗರು ತುಟಿ ಬಿಚ್ಚದಿರುವುದಿರುವುದರಿಂದ ಆ ಪಕ್ಷದ ಡೋಂಗಿತನಕ್ಕೆ ಸಾಕ್ಷಿ; ಕಾಂಗ್ರೆಸ್

Update: 2021-09-12 12:42 GMT

ಬೆಂಗಳೂರು, ಸೆ. 12: `ಕೇಂದ್ರದಲ್ಲಿಯೂ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ, ಮೈಸೂರು ಸಂಸದರೂ ಬಿಜೆಪಿ, ನಂಜನಗೂಡು ಶಾಸಕರೂ ಬಿಜೆಪಿ. ಹೀಗಿರುವಾಗ ದೇವಾಲಯದ ಒಂದು ಇಟ್ಟಿಗೆಯೂ ಅಲ್ಲಾಡಬಾರದಿತ್ತು! ಆದರೆ, ನಂಜನಗೂಡಿನ ದೇವಾಲಯದ ಧ್ವಂಸಕ್ಕೆ ಯಾವೊಬ್ಬ ಬಿಜೆಪಿಗರೂ ತುಟಿ ಬಿಚ್ಚದಿರುವುದಿರುವುದರಿಂದ ಬಿಜೆಪಿಯ ಧಾರ್ಮಿಕತೆಯ ಡೋಂಗಿತನ ಬಯಲಾಗಿದೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ನಂಜನಗೂಡಿನ ಪಾರಂಪರಿಕ ಮಹಾದೇವಮ್ಮ ದೇವಾಲಯವನ್ನ ರಾತ್ರೋ ರಾತ್ರಿ ಕೆಡವಿಹಾಕಿ `ಹಿಂದೂ ವಿರೋಧಿ ಬಿಜೆಪಿ' ತನ್ನೊಳಗಿನ ಅಸಲಿ ಹಿಂದೂ ವಿರೋಧಿ ಬಣ್ಣ ತೋರಿಸಿದೆ. ಅಧಿಕಾರಕ್ಕಾಗಿ `ಹಿಂದೂ' ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡದಿರುವುದೇಕೆ? ಅಸಲಿಗೆ ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ!' ಎಂದು ಟೀಕಿಸಿದೆ.

`ಬಿಜೆಪಿಗೆ ಬೇಕಿರುವುದು ಅಧಿಕಾರವಷ್ಟೇ ಅಭಿವೃದ್ಧಿಯಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ನೀಡಬೇಕಿದ್ದ ವಿಶೇಷ ಅನುದಾನವನ್ನು ಕೇಂದ್ರ ಸರಕಾರ ನೀಡಿಲ್ಲ, ರಾಜ್ಯ ಸರಕಾರ ಪೂರ್ಣ ಅನುದಾನ ನೀಡಿಲ್ಲ. ಕ.ಕ. ಭಾಗವನ್ನು ಸಂಪೂರ್ಣ ಕಡೆಗಣಿಸಿರುವ ಬಿಜೆಪಿಗೆ ಯಾವ ನೈತಿಕತೆಯಲ್ಲಿ ಕಲಬುರಗಿಯ ಮಹಾನಗರ ಪಾಲಿಕೆ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

`ಬಿಜೆಪಿಯ ಘೋಷಣೆಗಳು ಪ್ರಚಾರಕ್ಕಾಗಿ ಹೊರತು ಉಪಯೋಗಕ್ಕಾಗಿ ಅಲ್ಲ. ಕೊರೊನದಿಂದ ಮೃತರಾದ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಎಂದಿದ್ದರು. ಆದರೀಗ ಹಣ ನೀಡುವುದಿರಲಿ, ಅರ್ಜಿ ಸ್ವೀಕಾರ ಪ್ರಕ್ರಿಯೆಯೇ ಶುರುವಾಗಿಲ್ಲ. ಇದಲ್ಲದೆ ಲಾಕ್‍ಡೌನ್ ಪರಿಹಾರ 2ಸಾವಿರ ರೂ. ಕಾರ್ಮಿಕರ ಕೈಸೇರಿಲ್ಲ. ಕೇವಲ ಬಂಡಲ್‍ಗಳೇ ಬಿಜೆಪಿಯ ಬಂಡವಾಳ!' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News