×
Ad

ಕಳ್ಳರಂತೆ ಬಂದು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ: ಅಧಿಕಾರಿಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ

Update: 2021-09-12 19:06 IST
 ಸಂಸದ ಪ್ರತಾಪ್ ಸಿಂಹ 

ಮೈಸೂರು,ಸೆ.12: ಮಸೀದಿ, ಚರ್ಚ್‍ಗಳನ್ನು ತೆರವುಗೊಳಿಸಲು ಆಗದ ಅಧಿಕಾರಿಗಳು ಕಳ್ಳರಂತೆ ಬಂದು ಬೆಳಗಿನ ಜಾವ ಹಿಂದೂ ದೇವಾಲಯದ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾಡಳಿತ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅಗ್ರಹಾರದ ಬಳಿ ಇರುವ 101 ಗಣಪತಿ ದೇವಸ್ಥಾನದಲ್ಲಿ ರವಿವಾರ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಅಧಿಕಾರಿಗಳು ಮಸೀದಿ, ದರ್ಗಾ, ಚರ್ಚ್‍ಗಳನ್ನು ತೆರವುಗೊಳಿಸದೆ ಬರೀ ಹಿಂದೂ ದೇವಸ್ಥಾನಗಳನ್ನು ತೆರವುಗೊಳಿಸುತ್ತಿರುವುದು ಖಂಡನೀಯ, ಸುಪ್ರೀಂ ಕೋರ್ಟ್ ಆದೇಶ ಚರ್ಚ್, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕಟ್ಟಡಗಳು ಒಳಗೊಂಡಿದೆ. ಆದರೆ ಅಧಿಕಾರಿಗಳು ಧಾರ್ಮಿಕ ಕಟ್ಟಡಗಳನ್ನಷ್ಟೇ ತೆರವುಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ, ರಸ್ತೆ, ಫುಟ್‍ಪಾತ್‍ಗಳಲ್ಲಿ ಇರುವ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳನ್ನು ತೆರವುಗೊಳಿಸುವ ಮುನ್ನ ಬೇರೆ ಕಡೆ ಸ್ಥಳ ನೀಡಬೇಕು ಜೊತೆಗೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ತೆರವುಗೊಳಿಸಬೇಕು ಎಂದು ಹೇಳಿದ್ದರೂ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಕಳ್ಳರಂತೆ ಎಲ್ಲರೂ ಮಲಗಿರುವ ಬೆಳಗಿನ ಜಾವ 4 ಗಂಟೆ ಸಮಯಕ್ಕೆ ಜೆಸಿಬಿ, ಇಟಾಚಿ ತಂದು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ, ಆದರೆ ತೆರವುಗೊಳಿಸುವಲ್ಲಿ ತಾರತಮ್ಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಸುಪ್ರೀಂ ಆದೇಶ ಎಲ್ಲರಿಗೂ ಒಂದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಇರುವ ಧೈರ್ಯ ಮಸೀದಿ ಚರ್ಚ್‍ಗಳನ್ನು ತೆರವುಗೊಳಿಸಲು ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಧಾಮಿಕ ಕಟ್ಟಡಗಳ ತೆರವು ಕಾರ್ಯಚರಣೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ದೇವಸ್ಥಾನಗಳನ್ನು ಉಳಿಸಿ ಜನಾಂದೋಲನವನ್ನು ರಾಜ್ಯಾದ್ಯಂತ ಆರಂಭ ಮಾಡಬೇಕಾಗುತ್ತದೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಎಲ್ಲರನ್ನು ಸಮಾನರಾಗಿ ಕಾಣುವ ಮುಖ್ಯಮಂತ್ರಿ ಅವರು ಅಧಿಕಾರಿಗಳನ್ನು ಕರೆಸಿ ಸ್ಪಷ್ಟ ಸೂಚನೆ ನೀಡುತ್ತಾರೆ ಎಂಬ ನಂಬಿಕೆ ನಮಗಿದೆ. ದಯವಿಟ್ಟು ಅಧಿಕಾರಿಗಳು ರಾತ್ರೋರಾತ್ರಿ ದೇವಸ್ಥಾನಗಳನ್ನು ತೆರವುಗೊಳಿಸುವ ಕಾರ್ಯವನ್ನು ನಿಲ್ಲಿಸಿ, ಎಲ್ಲರ ವಿಶ್ವಾಸ ಪಡೆದು ನಂತರ ತೆರವುಗೊಳಿಸಲಿ. ನಂಜನಗೂಡಿನ ಬಳಿ ಆಧಿಶಕ್ತಿ ಮಹದೇವಮ್ಮ ದೇವಸ್ಥಾನವನ್ನು ಏಕಾ ಏಕಿ ತೆರವುಗೊಳಿಸುರುವುದು ಸರಿಯಲ್ಲ, ರಸ್ತೆಯನ್ನು ಸ್ವಲ್ಪ ಪಕ್ಕಕ್ಕೆ ಬದಲಿಸಿ ದೇವಸ್ಥಾನ ಉಳಿಸಿಕೊಳ್ಳಬಹುದಿತ್ತು ಎಂದು ಹೇಳಿದರು.

ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಮುನ್ನ ಪ್ರತ್ಯೇಕವಾಗಿ ಪರಿಗಣಿಸಿ ಆಯಾ ದೇವಸ್ಥಾನಗಳಿಗೆ ಬದಲಿ ಸ್ಥಳ ನೀಡಿ ನಂತರ ತೆರವುಗೊಳಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನಂದಾ ಪಾಲನೇತ್ರ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ದೇವಸ್ಥನದ ಅಧ್ಯಕ್ಷ ಶಿವರುದ್ರಪ್ಪ, ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್ ಉಪಸ್ಥಿತರಿದ್ದರು.

ಅಧಿಕಾರಿಗಳು ನಾವೇ ಬೃಹಸ್ಪತಿಗಳು ಎಂದು ಭಾವಿಸಿದ್ದಾರೆ. ರಾಜಕಾರಣಿಗಳು ಪ್ರಶ್ನಿಸಿದರೆ ಸುಪ್ರೀಂ ಕೋರ್ಟ್ ಆದೇಶ ಎಂಬ ನೆಪವೊಡ್ಡುತ್ತಿದ್ದಾರೆ. ನಮ್ಮ ಬಳಿಯೂ ಸುಪ್ರೀಂಕೋರ್ಟ್ ಆದೇಶವಿದೆ. ಬರಿ ಸುಳ್ಳುಗಳನ್ನು ಹೇಳುವ ಬದಲು ಆದೇಶವನ್ನು ಪಾಲಿಸಿ, ರಾಜಕಾರಣಿಗಳಿಗೆ ತಪ್ಪು ಮಾಹಿತಿ ನೀಡಿ ಧಿಕ್ಕುತಪ್ಪಿಸುವ ಕೆಲಸ ಮಾಡಬೇಡಿ.

- ಪ್ರತಾಪ್ ಸಿಂಹ,  ಸಂಸದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News