ರಾಜ್ಯದಲ್ಲಿ ನೀಟ್ ಪರೀಕ್ಷೆ ಬರೆದ 1.19 ಲಕ್ಷ ವಿದ್ಯಾರ್ಥಿಗಳು

Update: 2021-09-12 15:45 GMT

ಬೆಂಗಳೂರು, ಸೆ. 12: ವೈದ್ಯಕೀಯ, ದಂತ ವೈದ್ಯಕೀಯ ಸೇರಿ ಇತರ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕೆ ರವಿವಾರ(ಸೆ.12) ನೀಟ್-2021 (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆಯಿತು. ರಾಜ್ಯದಲ್ಲಿ 1.19 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದರು. 

ದೇಶ್ಯಾದ್ಯಂತ ಒಟ್ಟು 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದರು. ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮೈಸೂರು, ಮಂಗಳೂರು, ಉಡುಪಿ ಕೇಂದ್ರಗಳಲ್ಲಿ ರಾಜ್ಯದ ಅಭ್ಯರ್ಥಿಗಳು ಪರೀಕ್ಷೆ ಬರೆದರು. 3 ಗಂಟೆಗಳ ಕಾಲ 13 ಭಾಷೆಗಳಲ್ಲಿ ರಾಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ತಲಾ 45 ಪ್ರಶ್ನೆಗಳಂತೆ 180 ಪ್ರಶ್ನೆಗಳಿದ್ದು, ಪ್ರತಿ ಪ್ರಶ್ನೆಗೆ 4 ಅಂಕಗಳಿರಲಿವೆ. ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆದಿದ್ದು, ಪ್ರತಿ ಪ್ರಶ್ನೆಯ ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಕಡಿತವಾಗಲಿದೆ.

ಕೊರೋನ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕೊರೋನ ಕಾರಣದಿಂದ ನೀಟ್ ಪರೀಕ್ಷೆಗೆ ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಪಾಲನೆಗೆ ಸೂಚಿಸಲಾಗಿತ್ತು. ನೀಟ್ ಪರೀಕ್ಷಾರ್ಥಿಗಳಿಗೆ ಮೊದಲ ಡೋಸ್ ಲಸಿಕೆ ಕಡ್ಡಾಯ. ಕೊರೋನ ವ್ಯಾಕ್ಸಿನ್ ರಿಪೋರ್ಟ್ ಮೆಸೇಜ್ ಪರಿಶೀಲನೆ ಮಾಡಿ ಅವಕಾಶ ಕಲ್ಪಿಸಲಾಗಿತ್ತು. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತಾದರೂ ಅಂತಹ ಪ್ರಕರಣಗಳು ಕಂಡು ಬರಲಿಲ್ಲ. ಸೋಂಕಿನ ಲಕ್ಷಣ ಇದ್ದವರಿಗೆ ಪ್ರತ್ಯೇಕ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು.

ಕೊರೋನ ಹಿನ್ನೆಲೆಯಲ್ಲಿ ಒಂದು ಬೆಂಚಿನಲ್ಲಿ ಒಬ್ಬರೇ ಅಭ್ಯರ್ಥಿ ಕೂರಲು ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ದಾಖಲೆಗಳನ್ನು ಪರೀಕ್ಷಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಿ, ಥರ್ಮಾ ಸ್ಕ್ಯಾನಿಂಗ್ ಮಾಡಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ಅಭ್ಯರ್ಥಿಗಳು ಪರೀಕ್ಷೆಗೆ ಪೆನ್ನು ಕೊಂಡೊಯ್ಯುವಂತಿರಲಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಕೊಡುವ ಪೆನ್ನನ್ನೇ ಬಳಸಬೇಕು. ವಾಚ್, ಶೂ, ಪರ್ಸ್, ಬ್ಯಾಗ್, ಫುಲ್ ಸ್ಲೀವ್ಸ್ ಡ್ರಸ್, ಕ್ಯಾಲುಕ್ಯುಲೇಟರ್‍ಗಳನ್ನು ಪರೀಕ್ಷಾ ಕೇಂದ್ರದೊಳಗೆ ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News