ಸರಣಿ ರಜೆಗಳ ಹಿನ್ನೆಲೆ: ಕಾಫಿನಾಡಿನ ಸೊಬಗು ಸವಿಯಲು ಹರಿದು ಬಂದ ಪ್ರವಾಸಿಗರು

Update: 2021-09-12 15:53 GMT

ಚಿಕ್ಕಮಗಳೂರು, ಸೆ.12: ಕಾಫಿನಾಡಿನಲ್ಲಿ ಕೊರೋನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಸರಕಾರದ ಮಾರ್ಗಸೂಚಿಗಳ ಕಡ್ಡಾಯ ಪಾಲನೆಯೊಂದಿಗೆ ಪ್ರವಾಸಿಗರಿಗೆ ಕೆಲ ಷರತ್ತುಗಳನ್ನು ಹೇರಿದ್ದರೂ ಜಿಲ್ಲೆಯತ್ತ ಬರುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸರಣಿ ರಜೆಯಲ್ಲಿ ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು, ರವಿವಾರ ನಗರದಲ್ಲಿ ಪ್ರವಾಸಿಗರ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಲ್ಲದೇ, ಪೊಲೀಸರು-ಪ್ರವಾಸಿಗರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ವಾರಾಂತ್ಯದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಪ್ರವಾಸಿಗರು ಪಾಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಮಧ್ಯೆ ಸರಣಿ ಸರಕಾರಿ ರಜೆಗಳ ಹಿನ್ನೆಲೆಯಲ್ಲಿ ಕಳೆದ ಗುರುವಾರದಿಂದ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ರವಿವಾರ ಜಿಲ್ಲೆಯ ಪ್ರವಾಸಿತಾಣಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಬಂದಿದ್ದ ಪರಿಣಾಮ ಚಿಕ್ಕಮಗಳೂರು ನಗರ ಸೇರಿದಂತೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾ ಬುಡನ್‍ಗಿರಿ, ಕಲ್ಲತ್ತಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ವಾಹನಗಳಿಂದಾಗಿ ವಾಹಣ ಧಟ್ಟಣೆ, ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಸರಣಿ ರಜೆಗಳ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್ ವ್ಯಾಪ್ತಿಯ ಪ್ರಾಕೃತಿಕ ಸೊಬಗು ಸವಿಯಲು ಕಳೆದ ಮೂರು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಹಿನ್ನೆಲೆಯಲ್ಲಿ ನಗರದ ಐಜಿ ರಸ್ತೆ ಪ್ರವಾಸಿಗರ ವಾಹನಗಳಿಂದ ತುಂಬು ತುಳುಕುತ್ತಿದೆ. ಐಜಿ ರಸ್ತೆಗೆ ಇತ್ತೀಚೆಗೆ ಡಿವೈಡರ್ ಅಳವಡಿಸಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳಿಂದಾಗಿ ಕಳೆದ ಮೂರು ದಿನಗಳಿಂದ ವಾಹನ ಧಟ್ಟಣೆ, ಟ್ರಾಫಿಕ್ ಜಾಮ್ ಸಾಮಾನ್ಯವಾಗಿದ್ದು, ರವಿವಾರವೂ ಈ ರಸ್ತೆಯಲ್ಲಿ ವಾಹನಗಳ ಧಟ್ಟಣೆ ಹೆಚ್ಚಾಗಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. 

ದಕ್ಷಿಣ ಭಾರತದ ಅತೀ ಎತ್ತರದ ಪ್ರದೇಶವಾದ ಮುಳ್ಳಯ್ಯನಗಿರಿ ಹಾಗೂ ಸಮೀಪದ ದತ್ತಪೀಠ, ಕೆಮ್ಮಣ್ಣಗುಂಡಿ, ಚಾರ್ಮಾಡಿಘಾಟಿ ಪ್ರದೇಶ, ದೇವರಮನೆ, ಕಲ್ಲತ್ತಗಿರಿ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಶನಿವಾರ, ರವಿವಾರ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದರು. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು ಹಾಗೂ ಕಳಶೇಶ್ವರ ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಕ್ಷೇತ್ರಗಳಲ್ಲೂ ಭಕ್ತರ ದಂಡು ನೆರೆದಿತ್ತು. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ನೆರೆದಿದ್ದರಿಂದ ಚಿಕ್ಕಮಗಳೂರು ನಗರದಲ್ಲಿ ವಾಹನ ದಟ್ಟಣೆ ಎಂದಿಗಿಂತ ಜಾಸ್ತಿಯಾಗಿತ್ತು. ಮುಳ್ಳಯ್ಯಗಿರಿಗೆ ಸಾಗುವ ದಾರಿಯಲ್ಲಿ ಸಿಗುವ ಕೈಮರ ಚೆಕ್‍ಪೋಸ್ಟ್‍ನಲ್ಲಿ ಭಾರೀ ಪ್ರಮಾಣದ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸಲು ಚೆಕ್‍ಪೋಸ್ಟ್ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಡಬೇಕಾಯಿತು.

ಭಾರೀ ಪ್ರಮಾಣದ ವಾಹನಗಳು ಒಮ್ಮೆಲೇ ಜಮಾವಣೆಗೊಂಡಿದ್ದರಿಂದ ಗಟ್ಟೆಗಟ್ಟಲೇ ವಾಹನ ಸವಾರರು ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಸಿಲುಕಿಕೊಂಡಿದ್ದರು. ಪರಿಣಾಮ 3 ಕಿಮೀ ದೂರ ವಾಹನಗಳ ಸಾಲು ಕಂಡು ಬಂತು. ಗಿರಿ ವ್ಯಾಪ್ತಿಯಲ್ಲಿ ಸಾಗುವ ರಸ್ತೆ ಕಿರಿದಾಗಿರುವುದರಿಂದ, ಅಲ್ಲಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಹಾಗೂ ಪ್ರವಾಸಿಗರು ಒಮ್ಮೆಲೆ ಗುಂಪುಗೂಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಗಿರಿಗೆ ದಿನಕ್ಕೆ 300 ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಗಿರಿ ಪ್ರವಾಸಕ್ಕೆ ಬಂದಿದ್ದ ವಾಹನಗಳು ತಮ್ಮ ಸರದಿಗಾಗಿ ಗಂಟೆಗಟ್ಟಲೆ ಕಾಯಬೇಕಾಗಿ ಬಂದಿದ್ದರಿಂದ ಚೆಕ್‍ಪೋಸ್ಟ್ ಬಳಿ ಭಾರೀ ವಾಹನಗಳು ಜಮಾಯಿಸುವಂತಾಗಿತ್ತು. ವಾಹನಗಳನ್ನು ನಿಯಂತ್ರಿಸುವ ವೇಳೆ ವೇಳೆ ಪೊಲೀಸರು ಮತ್ತು ಪ್ರವಾಸಿಗರ ನಡುವೆ ಮಾತಿನ ಚಕಮಕಿಗೂ ನಡೆಯಿತು.

ಕೋವಿಡ್ ಹಿನ್ನೆಲೆ ಸೀಮಿತ ಪ್ರವಾಸಿಗರು ತೆರಳಲು ಅವಕಾಶ: ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿತಾಣಗಳಿಗೆ ಸೀಮಿತ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳಲು ಅವಕಾಶ ನೀಡಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದ್ದು, ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪ್ರವಾಸಿಗರು ಒಮ್ಮೆಲೆ ಧಾವಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ ಎಂದು ಚೆಕ್‍ಪೋಸ್ಟ್ ಸಿಬ್ಬಂದಿಯೊಬ್ಬರು ತಿಳಿಸಿದರು. 

ಕೋವಿಡ್ ಆತಂಕದ ಮಧ್ಯೆಯೂ ಹರಿದು ಬಂದ ಪ್ರವಾಸಿಗರು:

ಕಾಫಿನಾಡಿನಲ್ಲಿ ಸದ್ಯದ ಮಟ್ಟಿಗೆ ಕೊವೀಡ್ ಸೋಂಕು ನಿಯಂತ್ರಣದಲ್ಲಿದೆ. ಪ್ರತೀ ನಿತ್ಯ 50ಕ್ಕಿಂತ ಕಡಿಮೆ ಪ್ರಮಾಣದ ಸೋಂಕಿತರ ಸಂಖ್ಯೆ ಕಂಡು ಬರುತ್ತಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮದಿಂದ ಸೋಂಕು ಕ್ಷೀಣಿಸಿದ್ದು, ಜಿಲ್ಲೆಗೆ ಭೇಟಿನೀಡುವ ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಆದರೆ, ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬಾರೀ ಪ್ರಮಾಣದ ಪ್ರವಾಸಿಗರು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಹರಿದು ಬಂದಿದ್ದು, ಸ್ಥಳೀಯರಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಳ್ಳು ಆತಂಕ ಮೂಡಿಸಿದ್ದು ಪ್ರವಾಸಿಗರಿಗೆ ನಿಯಂತ್ರಣ ಹೇರುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತಕ್ಕೆ ತಲೆನೋವು: ಜಿಲ್ಲೆಯ ಪ್ರವಾಸಿತಾಣಗಳಿಗೆ ವಾರಾಂತ್ಯದಲ್ಲಿ ಬಾರೀ ಪ್ರಮಾಣದ ಪ್ರವಾಸಿಗರು ಹರಿದು ಬರುತ್ತಿತ್ತು.ವಾರಾಂತ್ಯದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ. ಆದರೆ. ಈ ಸಮಸ್ಯೆಗೆ ಶಾಶ್ವಾತ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಸರಣಿ ರಜೆಯ ಸಂದರ್ಭದಲ್ಲಿ ಪ್ರವಾಸಿಗರು ಎಲ್ಲಾ ನಿಯಮಗಳನ್ನು ಮೀರಿ ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಬಾರೀ ಪ್ರಮಾಣದಲ್ಲಿ ಪ್ರವಾಸಿಗರು ಬರುವುದರಿಂದ ಅಲ್ಲೀನ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ನಿರಾಸೆಯಿಂದ ಬೇರೆ ಪ್ರವಾಸಿತಾಣಗಳಿಗೆ ಮುಖ ಮಾಡಿದ ಪ್ರವಾಸಿಗರು: ವಾಯುಬಾರ ಕುಸಿತದಿಂದ ಜಿಲ್ಲೆಯಲ್ಲಿ ಆಗಾಗ್ಗೆ ಮಳೆಯಾಗುತ್ತಿದೆ. ಇಲ್ಲಿನ ಗಿರಿ ಪ್ರದೇಶದ ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ಸವಿಯುವ ಆಸೆಗಣ್ಣಿನಿಂದ ಬಂದ ಬಹುತೇಕ ಪ್ರವಾಸಿಗರು ವಾಹನ ದಟ್ಟಣೆಯನ್ನು ಕಂಡು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ಗಿರಿಗೆ ತೆರಳದೇ ಚಿಕ್ಕಮಗಳೂರು ನಗರ ಸಮೀಪದಲ್ಲಿರುವ ಅಯ್ಯನಕೆರೆ, ಹಿರೇಕೊಳಲೆ ಸೇರಿದಂತೆ ಇತರೆ ಪ್ರವಾಸಿ ತಾಣಗಳತ್ತಾ ಮುಖ ಮಾಡಿದ್ದರಿಂದ ಅಲ್ಲಿಯೂ ಜಿಲ್ಲಾಡಳಿತದ ಮಾರ್ಗಸೂಚಿ ಮೀರಿ ಪ್ರವಾಸಿಗರು ನೆರೆದಿದ್ದ ದೃಶ್ಯ ರವಿವಾರ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News