ಆಸ್ಪತ್ರೆ ಮ್ಯಾಪಿಂಗ್, ಜಿಪಿಎಸ್ ತಂತ್ರಜ್ಞಾನದ ಮೂಲಕ ಆಂಬ್ಯುಲೆನ್ಸ್ ಸೇವೆಗೆ ಆಧುನಿಕ ಸ್ಪರ್ಶ: ಸಚಿವ ಡಾ.ಕೆ.ಸುಧಾಕರ್

Update: 2021-09-12 16:29 GMT

ಬೆಂಗಳೂರು, ಸೆ. 12: `ಆರೋಗ್ಯ ಕವಚ ಯೋಜನೆಯಡಿ 710 ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ 155 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬುಲೆನ್ಸ್ ಆಗಿವೆ. ಇಂದು ಲೋಕಾರ್ಪಣೆಗೊಂಡಿರುವ 120 ಆಂಬ್ಯುಲೆನ್ಸ್‍ಗಳು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬುಲೆನ್ಸ್ ಆಗಿವೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರವಿವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, `ಆಂಬ್ಯುಲೆನ್ಸ್ ಸೇವೆ ಆರೋಗ್ಯ ಸೇವೆಯ ಪ್ರಮುಖ ಅಂಗವಾಗಿದ್ದು ತುರ್ತುಪರಿಸ್ಥಿತಿಗಲ್ಲಿ ಜೀವ ಉಳಿಸಲು ನಿರ್ಣಾಯಕ ಪಾತ್ರ ವಹಿಸುತ್ತವೆ. ಹೃದ್ರೋಗ, ಪಾಶ್ವವಾಯು(ಸ್ಟ್ರೋಕ್) ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ `ಗೋಲ್ಡನ್ ಅವರ್' ಎಂದು ಕರೆಯಲ್ಪಡುವ ಸಮಯ ನಿರ್ಣಾಯಕವಾಗಿದ್ದು ಆಂಬ್ಯುಲೆನ್ಸ್ ಸೇವೆಯ ಜಾಲ ವಿಸ್ತರಿಸಿ ಗುಣಮಟ್ಟ ಹೆಚ್ಚಿಸಲು ಹೊಸ ಕಾಯಕಲ್ಪ ನೀಡಲಾಗುವುದು' ಎಂದರು.

`2008ರಲ್ಲಿ ಅಂದಿನ ಸಿಎಂ ಬಿಎಸ್‍ವೈ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಅವಧಿಯಲ್ಲಿ ಆರಂಭವಾದ ಆರೋಗ್ಯ ಕವಚ ಸೇವೆಗೆ ಆಧುನಿಕ ಸ್ಪರ್ಶ ನೀಡಲಾಗುವುದು. ಆಸ್ಪತ್ರೆಗಳ ಮ್ಯಾಪಿಂಗ್, ಜಿಪಿಎಸ್ ತಂತ್ರಜ್ಞಾನ ಅಳವಡಿಸಿಕೊಂಡರೆ ವ್ಯಕ್ತಿ ಕರೆ ಮಾಡಿದ 10-15 ನಿಮಿಷದಲ್ಲಿ ಆಂಬ್ಯುಲೆನ್ಸ್ ತಲುಪಿ, ಸಮೀಪದ ಆಸ್ಪತ್ರೆಯನ್ನೂ ಗುರುತಿಸಬಹುದು. ಈಗ ನಗರ ಪ್ರದೇಶದಲ್ಲಿ 30-45 ನಿಮಿಷ ಹಾಗೂ ಗ್ರಾಮೀಣ ಭಾಗದಲ್ಲಿ 45 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಸೇವೆ ದೊರಕುವಂತೆ ಸುಧಾರಣೆ ತರಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ನೂತನ ಟೆಂಡರ್ ಕರೆದಿದ್ದು ಆದಷ್ಟು ಶೀಘ್ರದಲ್ಲಿ ಆರೋಗ್ಯ ಕವಚ ಸೇವೆಯನ್ನು ಇನ್ನಷ್ಟು ಸುಗಮಗೊಳಿಸಲಾಗುವುದು ಎಂದರು.

`ಪ್ರಸ್ತುತ 1 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಲಭ್ಯವಿದ್ದು, ಮುಂದಿನ ದಿನಗಳಲ್ಲಿ 40-50 ಸಾವಿರ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಲಭ್ಯತೆ ಕಲ್ಪಿಸಲಾಗುವುದು. ಆಂಬುಲನ್ಸ್ ಚಾಲಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ, ಉತ್ಕೃಷ್ಟ ಸೇವೆ ಒದಗಿಸುವ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ಸಚಿವ ಸುಧಾಕರ್ ಇದೇ ವೇಳೆ ಮಾಹಿತಿ ನೀಡಿದರು.

5 ಕೋಟಿ ಲಸಿಕೆಯತ್ತ ರಾಜ್ಯ ದಾಪುಗಾಲು: `ರಾಜ್ಯದಲ್ಲಿ ದಿನಕ್ಕೆ ಸರಾಸರಿ 3.8 ಲಕ್ಷ ಡೋಸ್ ಲಸಿಕ್ ನೀಡಲಾಗುತ್ತಿದ್ದು ಇದು ಇಡೀ ರಷ್ಯಾ ದೇಶದಲ್ಲಿ ನೀಡುತ್ತಿರುವ ಲಸಿಕೆಗಿಂತ ಹೆಚ್ಚಾಗಿದೆ. ಕರ್ನಾಟಕ 5 ಕೋಟಿ ಡೋಸ್ ಲಸಿಕೆ ವಿತರಣೆ ಪೂರೈಸುವತ್ತ ದಾಪುಗಾಲು ಇಡುತ್ತಿದ್ದು ಶೀಘ್ರವೇ ಈ ಮೈಲಿಗಲ್ಲು ತಲುಪಲಿದೆ'

-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News