ಸರಕಾರದಿಂದಲೇ ಗ್ರಾಮೀಣ ರೈತರ ಆರ್ಥಿಕತೆಯ ಕಗ್ಗೊಲೆ

Update: 2021-09-13 06:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನೋಟು ನಿಷೇಧವೆನ್ನುವುದು ಭಾರತದ ರೈತರ ಪಾಲಿಗೆ ಮುಗಿದು ಹೋದ ಕತೆಯೇನೂ ಅಲ್ಲ. ಈಗಲೂ ಅಧಿಕೃತವಾಗಿ ಚಲಾವಣೆಯಲ್ಲಿರುವ ನೋಟುಗಳನ್ನು ಸರಕಾರದ ನೀತಿಯಿಂದಾಗಿ ಬಳಸಲಾಗದೆ ಅವರು ಆರ್ಥಿಕವಾಗಿ ತತ್ತರಿಸಿಕೂತಿದ್ದಾರೆ. ನೋಟು ನಿಷೇಧವಾದಾಗ ನೂರಾರು ಉದ್ದಿಮೆಗಳು ಮುಚ್ಚಿದವು. ಸಹಸ್ರಾರು ಜನರು ನಿರುದ್ಯೋಗಿಗಳಾದರು. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಆದರೆ ಈ ನೋಟು ನಿಷೇಧದಿಂದ ಕಪ್ಪು ಹಣ ಮಾತ್ರ ಬರಲಿಲ್ಲ. ತಡವಾಗಿ ಸರಕಾರಕ್ಕೆ ಜ್ಞಾನೋದಯವಾಯಿತು. ಆದರೆ ಈ ಜ್ಞಾನೋದಯದಿಂದ ಸರಕಾರ ಪಾಠವನ್ನೇನೂ ಕಲಿತಿಲ್ಲ. ಈಗಲೂ ರೈತರ ಪಾಲಿನ ನೋಟುಗಳಿಗೆ ಸರಕಾರ ನಿಯಂತ್ರಣ ಮುಂದುವರಿಸಿದೆ.

ಗ್ರಾಮೀಣ ಪ್ರದೇಶದ ರೈತರಿಗೆ ಜಾನುವಾರುಗಳು ಎರಡನೇ ಕರೆನ್ಸಿ ಇದ್ದ ಹಾಗೆ. ಕೃಷಿಯನ್ನು ನಂಬಿರುವ ಗ್ರಾಮೀಣ ರೈತರು ತಾವು ಸಾಕುತ್ತಿರುವ ದನಗಳನ್ನೇ ಆರ್ಥಿಕ ವ್ಯವಹಾರಗಳಿಗೆ ಪರ್ಯಾಯವಾಗಿ ಬಳಸುತ್ತಾರೆ. ಗೋವುಗಳನ್ನು ಸಾಕುವಾಗ, ಅನುಪಯುಕ್ತ ಗೋವುಗಳನ್ನು ಮಾರಿ ಮನೆಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಮನೆಯ ದಿನಸಿ, ಹಟ್ಟಿಯ ಉಳಿದ ದನಗಳಿಗೆ ಆಹಾರ ಅಥವಾ ಮಗಳ ಮದುವೆ, ಮಕ್ಕಳ ಶಿಕ್ಷಣದ ಖರ್ಚು ಇತ್ಯಾದಿಗಳನ್ನು ಈಡೇರಿಸಿಕೊಳ್ಳುವುದು ಹಟ್ಟಿಯಲ್ಲಿರುವ ಅನುಪಯುಕ್ತ ದನಗಳನ್ನು ಮಾರುವ ಮೂಲಕ. ಹಟ್ಟಿಯಲ್ಲಿರುವ ಈ ಅನುಪಯುಕ್ತ ದನಗಳು ರೈತರ ಪಾಲಿಗೆ ಉಳಿತಾಯದ ಹಣ. ಆದರೆ ಸರಕಾರ ಜಾನುವಾರು ಮಾರಾಟಕ್ಕೆ ನಿಯಂತ್ರಣವನ್ನು ಹೇರುವ ಮೂಲಕ, ಈ ಉಳಿತಾಯದ ಹಣವನ್ನು ರೈತರು ಬಳಸದಂತೆ ತಡೆದಿದೆ.

ಇದು ಗ್ರಾಮೀಣ ಪ್ರದೇಶದ ಆರ್ಥಿಕ ವ್ಯವಹಾರಗಳ ಮೇಲೆ ಭಾರೀ ದುಷ್ಪರಿಣಾಮವನ್ನುಂಟು ಮಾಡಿದೆ. ಹಾಗೆ ದುಷ್ಪರಿಣಾಮ ಅನುಭವಿಸುತ್ತಿರುವ ರಾಜ್ಯಗಳ ಸಾಲಿಗೆ ಇದೀಗ ಈಶಾನ್ಯ ಭಾಗದ ಅಸ್ಸಾಂ ಕೂಡ ಸೇರಿಕೊಂಡಿದೆ. ಭಾರತೀಯ ಜನತಾ ಪಕ್ಷವು ಅಸ್ಸಾಮಿನಲ್ಲಿ ಮರಳಿ ಅಧಿಕಾರಕ್ಕೇರಿದ ಕೇವಲ ಮೂರು ತಿಂಗಳುಗಳ ಆನಂತರ ಅಲ್ಲಿನ ಸರಕಾರವು ಗೋವುಗಳ ರಕ್ಷಣೆಗಾಗಿ ಅಸ್ಸಾಂ ಜಾನುವಾರು ಸಂರಕ್ಷಣಾ ವಿಧೇಯಕ -2021ಅನ್ನು ಜುಲೈ 12ರಂದು ವಿಧಾನಸಭೆಯಲ್ಲಿ ಮಂಡಿಸಿ, ಆಗಸ್ಟ್ ತಿಂಗಳಲ್ಲಿ ಅಂಗೀಕರಿಸಿತು.ನೂತನ ಮಸೂದೆಯು ಅಸ್ಸಾಮ್‌ನಿಂದ ಹಾಗೂ ಇತರ ರಾಜ್ಯಗಳಿಂದ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಗೋವುಗಳನ್ನು ಸಾಗಿಸುವುದಕ್ಕೆ ನಿರ್ಬಂಧಿಸುತ್ತದೆ. ನೆರೆಯ ರಾಷ್ಟ್ರವಾದ ಬಾಂಗ್ಲಾದಲ್ಲಿ ಗೋವುಗಳ ಕಳ್ಳಸಾಗಣೆೆಯನ್ನು ತಡೆಗಟ್ಟುವುದು ಈ ಕಾನೂನಿನ ಉದ್ದೇಶವೆಂದು ಅಸ್ಸಾಮಿನ ಬಿಜೆಪಿ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಕಾನೂನು ಅನುಷ್ಠಾನ ಇಲಾಖೆಗಳು, ತಮ್ಮ ಮೂಗಿನ ನೇರಕ್ಕೆ ಈ ಕಾಯ್ದೆಯನ್ನು ವ್ಯಾಖ್ಯಾನಿಸುವುದರಿಂದ ನೂತನವಾಗಿ ಅಂಗೀಕರಿಸಲಾದ ಮಸೂದೆಯು ಯಾವುದೇ ವಯಸ್ಸಿನ ಗೋವುಗಳ ಮಾರಾಟವನ್ನು ವಸ್ತುಶಃ ಅಸಾಧ್ಯಗೊಳಿಸಿದೆ.ಅಷ್ಟೇ ಅಲ್ಲದೆ ಮಸೂದೆಯಲ್ಲಿನ ವಿರೋಧಾಭಾಸಗಳಿಂದಾಗಿ ಆ ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೂ ಕುಮ್ಮಕ್ಕು ದೊರೆತಿದೆ.

2001-14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಪಶುಸಂಗೋಪನೆ ವಲಯವು ರೈತರ ಆದಾಯದ ಬೆಳವಣಿಗೆಯಲ್ಲಿ ಅತಿ ದೊಡ್ಡ ಚಾಲಕ ಶಕ್ತಿಯಾಗಿತ್ತು. ಈ ಅವಧಿಯಲ್ಲಿ ಅದು ಶೇ.4.5ಕ್ಕಿಂತಲೂ ಅಧಿಕ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿತ್ತು. 2014ರಿಂದೀಚೆಗೆ ಬೀಫ್ ಹಾಗೂ ಚರ್ಮದ ರಫ್ತು ಉದ್ಯಮದ ಬೆಳವಣಿಗೆ ವಸ್ತುಶಃ ಸ್ಥಗಿತಗೊಂಡಿತು. 2013-14ರ ಸಾಲಿನಲ್ಲಿ ಬೀಫ್ ರಫ್ತು ಉದ್ಯಮದ ಬೆಳವಣಿಗೆ ಶೇ.35.93ಕ್ಕೆ ಕುಸಿಯಿತು. ಜಗತ್ತಿನ ಒಟ್ಟು ಚರ್ಮ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.13ರಷ್ಟಾಗಿದೆ. ಆದರೆ 2013-14ರ ವೇಳೆಗೆ ಚರ್ಮ ಹಾಗೂ ಚರ್ಮ ಉತ್ಪನ್ನಗಳ ರಫ್ತಿನ ಬೆಳವಣಿಗೆಯು ಶೇ.18ರಷ್ಟಿದ್ದರೆ, 2017-18ರ ಅವಧಿಯಲ್ಲಿ ಅದು ಶೇ.1.4ಕ್ಕೆ ಕುಸಿಯಿತು.

ಭಾರತದ ಒಟ್ಟಾರೆ ಜನಸಂಖ್ಯೆಯ ಶೇ.50ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ಅಸ್ಸಾಂ ರಾಜ್ಯದ ಶೇ.70ರಷ್ಟು ಜನಸಂಖ್ಯೆಯ ಜೀವನೋಪಾಯಕ್ಕೆ ಕೃಷಿಯೇ ಆಧಾರವಾಗಿದೆ. ಆದರೆ ನೂತನ ಗೋಸಂರಕ್ಷಣೆ ಕಾನೂನು ಅಸ್ಸಾಮಿನ ಗ್ರಾಮೀಣ ಆರ್ಥಿಕತೆಗೆ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದಾಗಿ ಅಸ್ಸಾಮಿನ ಒಟ್ಟಾರೆ ರೈತ ಆದಾಯದಲ್ಲಿ ನಕಾರಾತ್ಮಕ ಬೆಳವಣಿಗೆಯುಂಟಾಗಿರುವುದನ್ನು (-0.34 ಶೇ.) ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶವು ತೋರಿಸಿಕೊಟ್ಟಿದೆ. ರಾಜ್ಯದಲ್ಲಿ ಶೇ. 97ರಷ್ಟು ಜಾನುವಾರುಗಳು ಅಸಂಘಟಿತ ವಲಯದ ಜನರಿಗೆ ಸೇರಿದವು. ಬಹುತೇಕ ರೈತರು ದೇಶಿ ತಳಿಯ ಗೋವುಗಳನ್ನು ಸಾಕುತ್ತಿದ್ದಾರೆ. ಅವು ಸಾಮಾನ್ಯವಾಗಿ 10ರಿಂದ 12 ವರ್ಷಗಳಾದ ಬಳಿಕ ಹಾಲು ನೀಡುವುದನ್ನು ನಿಲ್ಲಿಸುತ್ತವೆ, ಆಗ ಅವುಗಳನ್ನು ಮಾರಾಟ ಮಾಡುವ ಮೂಲಕ ರೈತರು ಹೆಚ್ಚುವರಿ ಆದಾಯ ಗಳಿಸುತ್ತಾರೆ. 2012ನೇ ಸಾಲಿನಲ್ಲಿ ನಡೆದ 19ನೇ ಜಾನುವಾರುಗಣತಿಯಲ್ಲಿ ಅಸ್ಸಾಮಿನಲ್ಲಿ ಒಟ್ಟು 1,03,07,700 ಗೋವುಗಳಿದ್ದು, ಅವುಗಳಲ್ಲಿ ಕೇವಲ ಶೇ.3.84 ಉತ್ಕೃಷ್ಟ ತಳಿ ಅಥವಾ ಮಿಶ್ರ ತಳಿಗಳಾಗಿದ್ದವು. ಆದರೆ ರಾಷ್ಟ್ರ ಮಟ್ಟದಲ್ಲಿ ಈ ಪ್ರಮಾಣ ಶೇ. 20.81 ಆಗಿದೆ. ಆದಾಗ್ಯೂ, ಅಸ್ಸಾಮಿನ ಒಟ್ಟು ಹಾಲು ಉತ್ಪಾದನೆಯಲ್ಲಿ ಶೇ. 54.41 ಸ್ವದೇಶಿ ಗೋವು ತಳಿಗಳಿಂದಲೇ ಆಗುತ್ತದೆ.

ಮಥುರಾದ ಗೋ ಅನುಸಂಧಾನ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ ಹಾಲು ಕೊಡುವ ದನವು ಪ್ರತಿ ದಿನ 85 ರೂ. ಆದಾಯವನ್ನು ಗಳಿಸಿಕೊಡುತ್ತದೆ. ಆದರೆ ಅನುತ್ಪಾದಕ ದನವು, ರೈತನಿಗೆ ದಿನಕ್ಕೆ 60 ರೂ. ನಷ್ಟವನ್ನುಂಟು ಮಾಡುತ್ತದೆ.ಗೋವುಗಳ ಉತ್ಪಾದನಾಶೀಲತೆಯ ಅವಧಿ (ಹಾಲುನೀಡುವಿಕೆ)ಯು ಕೊನೆಗೊಂಡ ಬಳಿಕ ರೈತರಿಗೆ ನೂತನ ಕಾನೂನಿನಿಂದಾಗಿ ಅವುಗಳನ್ನು ತೊರೆಯದೆ ಬೇರೆ ಮಾರ್ಗವೇ ಇರಲಾರದು. ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡದಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ಕೃಷಿ ಸೊತ್ತುಗಳನ್ನು ಅಮಾನ್ಯಗೊಳಿಸಿದಂತೆ. ಇದರಿಂದಾಗಿ ಬಡ ರೈತನ ಆದಾಯಕ್ಕೆ ಸಹಜವಾಗಿಯೇ ಭಾರೀ ಹೊಡೆತ ಬೀಳುತ್ತದೆ. ಈ ಕಾನೂನಿಂದ ಉಂಟಾಗುವ ಆರ್ಥಿಕ ಹೊರೆಯು ಸಣ್ಣ ಹಿಡುವಳಿದಾರರ ಮೇಲೆ ಗಂಭೀರವಾದ ಹೊಡೆತ ನೀಡಲಿದೆ. ಅಸ್ಸಾಮಿನಲ್ಲಿ ಬಹುತೇಕ ಸಣ್ಣ ಹಿಡುವಳಿದಾರರು ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದು, ಪಶುಸಂಗೋಪನೆ ಅವರಿಗೆ ಪ್ರಮುಖ ಉಪ ಆದಾಯವಾಗಿದೆ. ಈ ರಾಜ್ಯದಲ್ಲಿ ಸಣ್ಣ ಹಾಗೂ ಮಧ್ಯಮವರ್ಗದ ರೈತರ ಪೈಕಿ ಶೇ.93.62ರಷ್ಟು ಕುಟುಂಬಗಳು ಪಶುಸಂಗೋಪನೆಯನ್ನೇ ಸ್ವ-ಉದ್ಯೋಗವಾಗಿ ತೊಡಗಿಸಿಕೊಂಡಿವೆ. ಅವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ ಪರಿಶಿಷ್ಟ ಹಾಗೂ ಬುಡಕಟ್ಟು ಸಮುದಾಯಗಳ ಪ್ರಮಾಣ ಶೇ.4.42 ಆಗಿದ್ದರೆ ಅಸ್ಸಾಮಿನಲ್ಲಿ ಅದು ಶೇ.22.73 ಆಗಿದೆ.

ಗೋವುಗಳ ಮಾರಾಟ ಹಾಗೂ ಗೋವು ಹತ್ಯೆಯ ವಿರುದ್ಧ ಕಠಿಣವಾದ ಗೋ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸಿದ ರಾಜ್ಯಗಳಲ್ಲಿ ಗೋವುಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆೆ. ನೂತನ ಕಾಯ್ದೆಯು ಗೋವುಗಳ ಸಂತತಿಯನ್ನು ರಕ್ಷಿಸುವ ತನ್ನ ಗುರಿಯನ್ನು ಸಾಧಿಸುವುದು ಅಸಾಧ್ಯ ಎನ್ನುವುದನು ಅಂಕಿಅಂಶಗಳೇ ಸಾಬೀತು ಮಾಡುತ್ತಿದೆ. ಇದು ಕೇವಲ ಅಸ್ಸಾಮಿಗೆ ಮಾತ್ರ ಸೀಮಿತವಾಗಿರುವ ಬೆಳವಣಿಗೆಯಲ್ಲ. ಸರಕಾರದ ಜಾನುವಾರು ಮಾರಾಟ ಕಾನೂನಿನಿಂದ ದೇಶದ ಬಹುತೇಕ ರಾಜ್ಯಗಳ ಗ್ರಾಮೀಣ ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಸರಕಾರ ಈ ಕಾನೂನಿನ ಮೂಲಕ ಗ್ರಾಮೀಣ ಭಾಗದ ಹೈನೋದ್ಯಮವನ್ನು ನಾಶ ಮಾಡುತ್ತಿದೆ. ಆ ಮೂಲಕ ಗೋ ಕುಲವನ್ನೂ ಹಂತ ಹಂತವಾಗಿ ಇಲ್ಲವಾಗಿಸಲು ಹೊರಟಿದೆ. ದೇಶದ ಆರ್ಥಿಕತೆ ನಾಶವಾಗುತ್ತಿರುವುದು ಆಕಸ್ಮಿಕವಲ್ಲ. ಇದೊಂದು ವ್ಯವಸ್ಥಿತ ಕೊಲೆ. ಈ ಕಗ್ಗೊಲೆಯ ನೇತೃತ್ವವನ್ನು ಸರಕಾರವೇ ವಹಿಸಿಕೊಂಡಿರುವುದು ವಿಪರ್ಯಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News