ಎಚ್.ಎಸ್.ದೊರೆಸ್ವಾಮಿ, ಡಾ.ಸಿದ್ದಲಿಂಗಯ್ಯ, ಸಿ.ಎಂ.ಉದಾಸಿ ಸಹಿತ 32 ಮಂದಿ ಗಣ್ಯರಿಗೆ ಸದನದಲ್ಲಿ ಶ್ರದ್ಧಾಂಜಲಿ

Update: 2021-09-13 13:32 GMT

ಬೆಂಗಳೂರು, ಸೆ. 13: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸ್ಪೀಕರ್ ಕೃಷ್ಣ, ಪರಿಷತ್ ಮಾಜಿ ಸದಸ್ಯ ಹಾಗೂ ದಲಿತ ಕವಿ ಡಾ.ಸಿದ್ಧಲಿಂಗಯ್ಯ, ಹಾಲಿ ಶಾಸಕ ಸಿ.ಎಂ.ಉದಾಸಿ, ಪರಿಷತ್ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ, ಮಾಜಿ ಸಚಿವರಾಗಿದ್ದ ಪ್ರೊ.ಮುಮ್ತಾಜ್ ಆಲಿಖಾನ್, ಎ.ಕೆ.ಅಬ್ದುಲ್ ಸಮದ್, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಸೇರಿದಂತೆ ಇತ್ತೀಚಿಗೆ ಅಗಲಿದ 32 ಮಂದಿ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಸೋಮವಾರ ವಿಧಾನಸಭೆ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು. 6 ತಿಂಗಳ ನಂತರ ವಿಧಾನಸಭೆ ಅಧಿವೇಶ ನಡೆಯುತ್ತಿದ್ದು, ಈ ಮನೆಯ ಹಾಲಿ ಸದಸ್ಯರಾಗಿದ್ದ ಸಿ.ಎಂ.ಉದಾಸಿ ಸಹಿತ ನಾಡಿನ ಹಲವು ಗಣ್ಯರು ನಮ್ಮನ್ನು ಅಗಲಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಯುಪಿ ಮಾಜಿ ಸಿಎಂ ಕಲ್ಯಾಣ್‍ಸಿಂಗ್, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್, ಮಾಜಿ ಸಂಸದ ಜಿ. ಮಾದೇಗೌಡ, ಎಸ್.ಬಿ.ಸಿದ್ನಾಳ್, ಎಂ.ರಾಮ್‍ಗೋಪಾಲ್, ಮಾಜಿ ಶಾಸಕರಾದ ರೇವಣಸಿದ್ದಪ್ಪ ಕಲ್ಲೂರ, ಸದಾಶಿವರಾವ ಬಾಪೂ ಸಾಹೇಬ ಭೋಸಲೆ, ಡಾ.ಚಿತ್ತರಂಜನ್ ಕಲಕೋಟಿ, ಡಾ.ಜೆಕಬ್ ಟಿ.ಜೆ., ಸಯ್ಯದ್ ಝುಲ್ಫಿಖಾರ್ ಹಾಶ್ಮಿ, ಮುಹಮ್ಮದ್ ಲೈಖುದ್ದೀನ್, ಮನೋಹರ್ ಕಟೀಮನಿ, ಎನ್.ಎಸ್.ಖೇಡ್, ಸೂ.ರಂ.ರಾಮಯ್ಯ, ರಾಜಶೇಖರ ಸಿಂಧೂರ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎನ್.ಎ.ಹೆಗಡೆ, ಶಿಕ್ಷಣ ತಜ್ಞರಾದ ಪ್ರೊ. ಎಂ.ಐ.ಸವದತ್ತಿ, ಪರಿಸರ ಹೋರಾಟಗಾರ ಸುಂದರ್‍ಲಾಲ್ ಬಹುಗುಣ, ಕ್ರೀಡಾಪಟು ಮಿಲ್ಕಾಸಿಂಗ್, ಚಿತ್ರನಟಿ ಜಯಂತಿ, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆಯರ್, ಸಾಹಿತಿ ಡಾ.ವಂಸತ ಕುಷ್ಟಗಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮೋಹನ್ ಶಾಂತನಗೌಡರ್ ಸೇರಿದಂತೆ ಕೋವಿಡ್ ಹಾಗೂ ಅತಿವೃಷ್ಟಿಯಿಂದ ಅಗಲಿದ ಎಲ್ಲರನ್ನು ಸ್ಮರಿಸಿದರು. 

ಶಸ್ತ್ರ ಚಿಕಿತ್ಸೆ ಬಳಿಕ ಉರ್ದು ಬರವಣಿಗೆ ಕಲಿತರು: ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ಸಂತಾಪ ಸೂಚನೆ ಸಹಜ ಪ್ರಕ್ರಿಯೆ ಆಗದೆ, ಅಗಲಿದ ಗಣ್ಯರಿಗೆ ಗೌರವ ಸಲ್ಲಿಸುವುದೆಂದರೆ ಅವರು ನಡೆದು ಬಂದ ದಾರಿಯನ್ನು ನೆನಪು ಮಾಡಿಕೊಳ್ಳಬೇಕು. ಅತ್ಯಂತ ಮೃಧು ಸ್ವಭಾವದ ಸಿ.ಎಂ.ಉದಾಸಿ ಅವರು ಹಸ್ತಾಕ್ಷರ ಬಹಳ ಮುದ್ದಾಗಿರುತ್ತಿತ್ತು. ಅದು ಅವರ ವ್ಯಕ್ತಿತ್ವದ ಸಂಕೇತವು ಹೌದು. ಸಾಮಾನ್ಯ ಜ್ಞಾನದ ಮೇಲೆ ಅವರು ರಾಜಕಾರಣ ಮಾಡುತ್ತಿದ್ದರು' ಎಂದು ನೆನಪು ಮಾಡಿಕೊಂಡರು.
`ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು, ಮರಾಠಿ, ತಮಿಳು, ತುಳು ಸೇರಿದಂತೆ ಏಳು ಭಾಷೆ ಮಾತನಾಡುತ್ತಿದ್ದ ಉದಾಸಿ ಅವರು, ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಹತ್ತು ದಿನಗಳ ಆಸ್ಪತ್ರೆಯಲ್ಲಿದ್ದ ಅವಧಿಯಲ್ಲೆ ಅವರು ಉರ್ದು ಬರವಣಿಯನ್ನು ಕಲಿತವರು. ಹಾವೇರಿ ಜಿಲ್ಲೆಯನ್ನಾಗಿ ಮಾಡಲು ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಉದಾಸಿ ಅವರ ಕೊಡುಗೆ ಹೆಚ್ಚಿದೆ.

ನಾನು ಶಾಸಕ, ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಲು ಉದಾಸಿ ಅವರ ಕೊಡುಗೆ ಇದೆ. ನಾನು ಈ ಎತ್ತರಕ್ಕೆ ಬೆಳೆಯಲು ಅವರ ಪಾತ್ರವೂ ಇದೆ. ಅವರ ಅಗಲಿಕೆ ಹಾವೇರಿ ಜಿಲ್ಲೆ ಮತ್ತು ರಾಜ್ಯದ ರೈತರಿಗೆ ಅನ್ಯಾಯವಾಗಿದೆ' ಎಂದು ಸ್ಮರಿಸಿದ ಬೊಮ್ಮಾಯಿ, `ಮಂಡ್ಯ ಜಿಲ್ಲೆಯ ಮಾಜಿ ಸ್ಪೀಕರ್ ಕೃಷ್ಣ, ಜಿ.ಮಾದೇಗೌಡ ಅವರ ನಿಧನದಿಂದ ಜಿಲ್ಲೆಯಲ್ಲಿ ಸಜ್ಜನ ರಾಜಕಾರಣಿಗಳ ಕೊರತೆ ಎದ್ದು ಕಾಣುತ್ತಿದೆ' ಎಂದು ನೆನಪಿಸಿಕೊಂಡರು.

ಇವರ ಹೋರಾಟದಿಂದ ನನ್ನ ಮಂತ್ರಿ ಸ್ಥಾನ ಹೋಯ್ತು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, `ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಎನ್.ಎಸ್.ಶೇಡ್ ಅವರು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಶಾಸಕರಾಗಿದ್ದರು. ಅವರು ಕೆಲವರನ್ನು ಸಂಪುಟದಿಂದ ಕೈಬಿಡಬೇಕೆಂದು ಹೋರಾಟ ಮಾಡಿದರು. ಆಗ ಹೆಗಡೆ ಅವರು ನನ್ನನ್ನೂ ಸೇರಿದಂತೆ 13 ಮಂದಿಯನ್ನು ಸಂಪುಟದಿಂದ ಕೈಬಿಟ್ಟರು. ಅವರು ಹೋರಾಟ ಮಾಡಿದ್ದರಿಂದ ನನ್ನ ಮಂತ್ರಿ ಸ್ಥಾನವು ಹೋಯ್ತು' ಎಂದು ನೆನಪು ಮಾಡಿಕೊಂಡರು.

ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರು ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೆಲ ನಕ್ಸಲೀಯ ಮುಖಂಡರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ್ದರು. ಗಾಂಧಿ ವಿಚಾರಧಾರೆಗಳಿಂದ ವಿಮುಖವಾಗುತ್ತಿರುವ ಕಾರಣ ಇಂದು ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೋರೋನ ಮತ್ತು ಅತಿವೃಷ್ಟಿಯಿಂದ ಹಲವು ಮಂದಿ ಅಸುನೀಗಿದ್ದಾರೆ. ಅಲ್ಲದೆ, ಕೋವಿಡ್ ಸೋಂಕಿನ ಎರಡನೆ ಅಲೆ ಸಂದರ್ಭದಲ್ಲಿ ಆಕ್ಸಿಜನ್, ಹಾಸಿಗೆ, ಚಿಕಿತ್ಸೆ, ಐಸಿಯು, ಔಷಧ ಇಲ್ಲದೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಸರಕಾರದ ಅಂಕಿ-ಅಂಶಗಳಿಗಿಂತ ಹತ್ತುಪಟ್ಟು ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅವರೆಲ್ಲರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸ್ಮರಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಮಾಜಿ ಸಚಿವ ಸಿ.ಎಂ.ಉದಾಸಿ ಅವರಿಗೆ ಏನ್ ಸಾರ್ ಏಳೆಂಟು ಭಾಷೆ ಹೇಗೆ ಮಾತನಾಡುತ್ತಿದ್ದೀರಿ? ಎಂದರೆ ಅವರು ಹೋಗ್ರಿ ಬಸ್ ನಿಲ್ದಾಣದಲ್ಲಿರುವವರು ನನಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆಂದು ಹೇಳುತ್ತಿದ್ದರು. ಬಹಳ ಯಂಗ್ ಆಗಿ ಕಾಣ್ತಿರಲ್ಲ ಅಂದ್ರೆ.. ಹಳೆಯ ಶೂಗೆ ಹೆಚ್ಚು ಪಾಲಿಶ್ ಜಾಸ್ತಿ ಹಾಕಬೇಕು ಎಂದು ಚಟಾಕಿ ಹಾರಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಮಂತ್ರಿ ಆಗಬೇಕಿತ್ತು: ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಎಸ್.ಯಡಿಯೂರಪ್ಪನವರ ಅತ್ಯಂತ ಆಪ್ತರಾಗಿದ್ದ ಸಿ.ಎಂ.ಉದಾಸಿ ಅವರು, ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿ ಆಗಬೇಕಿತ್ತು. ಆದರೆ, ಅದೇಕೋ ಏನೋ ಅವರನ್ನು ಬಿಎಸ್‍ವೈ ಸಚಿವರನ್ನಾಗಿ ಮಾಡಲಿಲ್ಲ.

ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಸಿ.ಪಾಟೀಲ್, ನಾರಾಯಣಗೌಡ ಸೇರಿದಂತೆ ಇನ್ನಿತರ ಮುಖಂಡರು ಮಾತನಾಡಿದರು. ಆ ಬಳಿಕ ಅಗಲಿದ ಗಣ್ಯರ ಸ್ಮರಣಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News