ಹಿಂದಿನ ಸಾಲಿನಲ್ಲಿ ಕೂತು ಗಮನ ಸೆಳೆದ ಯಡಿಯೂರಪ್ಪ, ಪ್ರೇಕ್ಷಕರ ಗ್ಯಾಲರಿಯಲ್ಲಿ ಪಾಲಿಕೆ ಸದಸ್ಯರು!

Update: 2021-09-13 13:51 GMT

ಬೆಂಗಳೂರು, ಸೆ. 13: ರಾಜ್ಯದ ಜನತೆಯ ನಿರೀಕ್ಷೆಯ ವಿಧಾನ ಮಂಡಲ ಮಳೆಗಾಲದ ಉಭಯ ಸದನಗಳ ಅಧಿವೇಶನ ಕಲಾಪ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ವಿದ್ಯುಕ್ತವಾಗಿ ಆರಂಭವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಅವರಿಗೆ ಚೊಚ್ಚಲ ಅಧಿವೇಶನ ಇದಾಗಿದ್ದು, ನಾಳೆ(ಸೆ.14)ಯಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲ, ಕೋಲಾಹಲಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

10 ದಿನಗಳ ಕಾಲ ನಡೆಯುವ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷ ಕಾಂಗ್ರೆಸ್ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ `ಎತ್ತಿನ ಗಾಡಿ'ಯಲ್ಲಿ ಸದನಕ್ಕೆ ಆಗಮಿಸುವ ಮೂಲಕ ತಮ್ಮ ಪ್ರತಿಭಟನೆ ಹಾದಿ ಹೇಗೆ ಇರಲಿದೆ ಎಂಬ ಮುನ್ಸೂಚನೆ ನೀಡಿದೆ.

ಈ ನಡುವೆ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಬಿಎಸ್‍ವೈ ಅವರು ಅಧಿವೇಶನದಿಂದ ದೂರ ಉಳಿಯಲಿದ್ದಾರೆಂಬ ನಿರೀಕ್ಷೆ ಹುಸಿಗೊಳಿಸಿದರು. ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ತಮ್ಮ ಎಂದಿನ ಶೈಲಿಯಲ್ಲೇ ಆಗಮಿಸಿ ಹಿಂದಿನ ಸಾಲಿನಲ್ಲಿ ಕುಳಿತುಕೊಂಡು ಎಲ್ಲರ ಗಮನ ಸೆಳೆಯಿತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರಂತೆ ಹಿಂದಿನ ಸಾಲಿನಲ್ಲಿ ಕುಳಿತಿದ್ದು ವಿಶೇಷವಾಗಿತ್ತು. ಆದರೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಇಂದಿನ ಅಧಿವೇಶನಕ್ಕೆ ಗೈರಾದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಯ ಕೆಲ ಹಿರಿಯರು ಸದನಕ್ಕೆ ಆಗಮಿಸಿರಲಿಲ್ಲ.

ಸತೀಶ್ ರೆಡ್ಡಿ ಮುಖ್ಯ ಸಚೇತಕ: ಸಚಿವ ಸ್ಥಾನ ಕೈತಪ್ಪಿದ್ದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರಿಗೆ ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಹೀಗಾಗಿ ಸತೀಶ್ ರೆಡ್ಡಿ ಅವರು ಬಿಎಸ್‍ವೈ ಅವರ ಆಸನದ ಪಕ್ಕದಲ್ಲೇ ಕೂತು ಗಮನ ಸೆಳೆದರು.

ಸಿಎಂ ಬೊಮ್ಮಾಯಿ ಕಲಾಪ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಸ್ಪೀಕರ್ ಅನುಮತಿಯೊಂದಿಗೆ ಗುಜರಾತ್ ನೂತನ ಮುಖ್ಯಮಂತ್ರಿ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಹಮದಾಬಾದ್‍ಗೆ ಪ್ರಯಾಣ ಬೆಳೆಸಿದರು. ಹೊರಡುವ ಮುನ್ನ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲ ಹೊತ್ತು ಸಮಾಲೋಚನೆ ನಡೆಸಿದರು.

ಪ್ರೇಕ್ಷಕರ ಗ್ಯಾಲರಿಯಲ್ಲಿ ಪಾಲಿಕೆ ಸದಸ್ಯರು: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 35 ಮಂದಿ ಬಿಜೆಪಿ ಅಭ್ಯರ್ಥಿಗಳು ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಗೆ ಕೇಸರಿ ಪೇಟಾ ತೊಟ್ಟು ಸದನದ ಕಲಾಪವನ್ನು ಕೆಲಕಾಲ ತದೇಕಚಿತ್ತರಾಗಿ ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News