ದೇಗುಲ ರಕ್ಷಣೆಗೆ ಸೂಕ್ತ ಕ್ರಮದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ: ಪ್ರತಾಪಸಿಂಹ
ಮೈಸೂರು,ಸೆ.13: ದೇಗುಲ ವಿಚಾರದ ಬಗ್ಗೆ ಮುಖ್ಯಮಂತ್ರಿ ಕರೆ ಮಾಡಿ ಮಾತನಾಡಿದ್ದಾರೆ. ಉಚ್ಚಗಣಿ ದೇಗುಲ ತೆರವುಗೊಳಿಸಿರುವ ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕೆಂದು ಕೇಳಿಕೊಂಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2009ಕ್ಕಿಂತ ಮೊದಲು ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಕ್ಕೆ ಸಂಬಂಧಿಸಿದಂತೆ ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ಪರಾಮರ್ಶಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಒಡೆದು ಹಾಕಲು ಹೇಳಿಲ್ಲ. ಆದರೆ, ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಈ ವಿಚಾರವನ್ನೂ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಇನ್ನು ಮುಂದೆ ಅಧಿಕಾರಿಗಳು ದೇಗುಲ ತೆರವು ಮಾಡಲು ಪ್ರಯತ್ನಿಸಬಾರದು ಎಂದರು.
ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯೊಡ್ಡದ, ಉದ್ಯಾನಗಳಲ್ಲಿರುವ ದೇಗುಲಗಳನ್ನು ಸಕ್ರಮಗೊಳಿಸಬೇಕು. ಹೊಸದಾಗಿ ಪಟ್ಟಿ ತಯಾರಿಸಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ದೇಗುಲ, ಚರ್ಚ್, ಮಸೀದಿ ನಿರ್ಮಿಸುವಂತಿಲ್ಲ. ಆದರೆ, ಮೈಸೂರಿನ ಕ್ಯಾತಮಾರನಹಳ್ಳಿಯ ವಸತಿ ಪ್ರದೇಶದಲ್ಲಿ ಮಸೀದಿ ಅನಧಿಕೃತವಾಗಿ ತಲೆ ಎತ್ತಿದೆ. ಇದು ಹಲವಾರು ಸಮಸ್ಯೆಗೆ ಕಾರಣವಾಗಿದೆ. ಇದು ಕೋರ್ಟ್ ಆದೇಶದ ಉಲ್ಲಂಘನೇ ಅಲ್ಲವೇ? ಎಂದು ಪ್ರಶ್ನಿಸಿದರು.