ಆಸ್ಕರ್ ಫೆರ್ನಾಂಡಿಸ್ ಅಧಿಕಾರದ ದರ್ಪವಿಲ್ಲದ ಸರಳ ಸಜ್ಜನಿಕೆಯ ನಾಯಕ: ಸಿದ್ದರಾಮಯ್ಯ

Update: 2021-09-13 15:31 GMT

ಬೆಂಗಳೂರು, ಸೆ.13: ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್ ಪಕ್ಷದಲ್ಲಿ ಯುವಕರನ್ನು ಗುರುತಿಸಿ, ನಾಯಕರಾಗಿ ಬೆಳೆಸುವ ಶಕ್ತಿ ಹಾಗೂ ಕಾಳಜಿ ಇದ್ದಂತವರು. ಅಧಿಕಾರದ ದರ್ಪವಿಲ್ಲದ ಸರಳ ಸಜ್ಜನಿಕೆಯ ನಾಯಕರಾಗಿದ್ದರು, ಕಾರ್ಯಕರ್ತರಿಂದ ಹಿಡಿದು ದೊಡ್ಡ ಮುಖಂಡರವರೆಗೆ ಪ್ರತಿಯೊಬ್ಬರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಗೌರವಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್‍ನ ಒಬ್ಬ ನಿಷ್ಠಾವಂತ ಕಾರ್ಯಕರ್ತರಂತಿದ್ದರು. ಹಾಗಾಗಿ ಅವರು ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾದರಿಯಾಗಿದ್ದರು. ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಆಪ್ತರಾಗಿದ್ದರು. ವಿಶ್ವಾಸಕ್ಕೆ ಅರ್ಹರಾದ ವ್ಯಕ್ತಿಯಾಗಿದ್ದ ಕಾರಣಕ್ಕೆ ದೀರ್ಘ ಕಾಲ ರಾಜಕಾರಣದಲ್ಲಿ ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ನಲವತ್ತು ವರ್ಷ ದೀರ್ಘಕಾಲ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು, ಕೇಂದ್ರ ಸರಕಾರದ ಮಂತ್ರಿಯಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರದ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಆಸ್ಕರ್ ಫೆರ್ನಾಂಡಿಸ್ ಕೆಲಸ ಮಾಡಿದ್ದಾರೆ. ನಾನು ಯಾವಾಗ ಕೇಳಿದ್ರೂ ಭೇಟಿಗೆ ಅವಕಾಶ ನೀಡುತ್ತಾ ಇದ್ದರು ಎಂದು ಅವರು ತಿಳಿಸಿದರು.

ನಾನು ಕಾಂಗ್ರೆಸ್ ಸೇರಬೇಕೆಂದು ತೀರ್ಮಾನ ಮಾಡಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿದ್ದರು, ಖರ್ಗೆಯವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ನಂತರ ನಾನು ಮೊದಲು ಭೇಟಿ ಮಾಡಿದ್ದು ಆಸ್ಕರ್ ಫೆರ್ನಾಂಡಿಸ್ ಅವರನ್ನು. ಆಗ ಅತ್ಯಂತ ಆತ್ಮೀಯವಾಗಿ ಪ್ರೀತಿಯಿಂದ ಪಕ್ಷಕ್ಕೆ ಸ್ವಾಗತಿಸಿದ್ದರು. ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮಾನವೀಯ ಗುಣಗಳನ್ನು ಅಳವಡಿಸಿಕೊಂಡ ನಾಯಕರು ಬಹಳ ವಿರಳ, ಅವರು ಮಂತ್ರಿಯಾಗಿದ್ದಾಗ ನಮ್ಮ ರಾಜ್ಯಕ್ಕೆ ಏನನ್ನು ಕೇಳಿದ್ರು ಆಗಲ್ಲ ಎಂದು ಹೇಳುತ್ತಿರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಆಸ್ಕರ್ ಫೆರ್ನಾಂಡಿಸ್ ಅವರು ಭೂ ಸಾರಿಗೆ ಸಚಿವರಾಗಿದ್ದರು, ಒಮ್ಮೆ ಮಹದೇವಪ್ಪ ಅವರ ಜೊತೆ ಅವರ ಕಚೇರಿಗೆ ಹೋಗಿದ್ದೆ. ಒಂದೇ ಸಭೆಯಲ್ಲಿ ರಾಜ್ಯ ಹೆದ್ದಾರಿಯಾಗಿದ್ದ ಮೈಸೂರು-ಬೆಂಗಳೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಹತ್ತು ಪಥಗಳ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಕೊಡಿಸಿದ್ರು. ಈಗ ಯಾರೋ ಸಂಸದ ಇದನ್ನು ತಾನು ಮಾಡಿಸಿದ್ದು ಅಂತ ಪ್ರಚಾರ ಪಡ್ಕೊತಿದಾರೆ, ವಾಸ್ತವದಲ್ಲಿ ಇದು ಆಸ್ಕರ್ ಫೆರ್ನಾಂಡಿಸ್ ಅವರ ಕೊಡುಗೆ. ಇದರಿಂದ ಮೂರು ಗಂಟೆಗಳ ಪ್ರಯಾಣ ಎರಡೇ ಗಂಟೆಗೆ ಇಳಿಯುತ್ತೆ ಎಂದು ಅವರು ಹೇಳಿದರು.

ಈ ರೀತಿ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ, ಕಾಳಜಿ ಇದ್ದಂತ ನಾಯಕ ಎಂದು ಇಂದು ನೆನಪಿಸಿಕೊಳ್ಳಬೇಕಾಗುತ್ತದೆ. ಅವರ ಸಾವು ನಿಜಕ್ಕೂ ಅನಿರೀಕ್ಷಿತ. ಸದಾ ಯೋಗಸನಾ, ಕುಚಿಪುಡಿ ನೃತ್ಯ ಮಾಡುತ್ತಾ, ಶುದ್ಧ ಸಸ್ಯಾಹಾರಿಯಾಗಿದ್ದು, ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದ ವ್ಯಕ್ತಿಯಾಗಿದ್ದೂ ಎಪ್ಪತ್ತನೇ ವಯಸ್ಸಿಗೆ ನಮ್ಮನ್ನೆಲ್ಲ ಅಗಲಿರುವುದು ದುಃಖಕರ ಎಂದು ಸಿದ್ದರಾಮಯ್ಯ ಹೇಳಿದರು.

ಸಜ್ಜನರು ದೀರ್ಘಕಾಲ ಬದುಕಲ್ಲ ಎಂಬ ಗಾಧೆ ಮಾತಿದೆ ಹಾಗಾಗಿಯೇ ಇವರು ಕೂಡ ಬಹಳ ಬೇಗ ಇಹಲೋಕ ತ್ಯಜಿಸಿದ್ದಾರೆ. ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕಿತ್ತು, ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅಂತಹಾ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಅವರು ತಿಳಿಸಿದರು.

ರಾಜಕಾರಣಿಗಳಿಗೆ ತಾಳ್ಮೆ ಕಡಿಮೆ, ಆದರೆ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಹಿಮಾಲಯದಷ್ಟು ತಾಳ್ಮೆಯಿತ್ತು. ಇಂತಹ ವ್ಯಕ್ತಿ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗದವರಿಗೆ, ಬಂಧು ಬಳಗದವರಿಗೆ, ಅಭಿಮಾನಿಗಳಿಗೆ ಸಾವಿನ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News