'ನಿಮ್ಮ ಆಡಳಿತದಲ್ಲಿರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತಾ'?: ಕಾಂಗ್ರೆಸ್ ನಾಯಕರಿಗೆ ಶ್ರೀರಾಮುಲು ಪ್ರಶ್ನೆ

Update: 2021-09-13 15:51 GMT

ಬೆಂಗಳೂರು, ಸೆ. 13: `ಪ್ರತಿಪಕ್ಷ ಕಾಂಗ್ರೆಸ್ ಹಲವು ವರ್ಷಗಳಿಂದಲೂ ಕೇವಲ ಗಿಮಿಕ್ ಮಾಡಿಕೊಂಡೆ ಬರುತ್ತಿದೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು  ಟೀಕಿಸಿದ್ದಾರೆ.

ಸೋಮವಾರ ವಿಧಾನಸಭೆಯ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಎತ್ತಿನ ಗಾಡಿಯಲ್ಲಿ ವಿಧಾನಸಭೆಗೆ ಆಗಮಿಸಿದ ಕಾಂಗ್ರೆಸ್ ನಾಯಕರ ನಡೆ ಕೇವಲ ಗಿಮಿಕ್ ಅಷ್ಟೇ' ಎಂದು ಟೀಕಿಸಿದರು.

`ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕಡಿಮೆ ಇತ್ತೇ? ನಿಮಗೆ ನಾನು ಒಂದು ಸವಾಲು ಹಾಕುತ್ತೇನೆ. ನಿಮ್ಮ ಆಡಳಿತದಲ್ಲಿರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತಾ?' ಎಂದು ಶ್ರೀರಾಮುಲು ಪ್ರಶ್ನಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಾಗಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡಿದೆಯೇ? ನಿಮಗೆ ತಾಕತ್ತಿದ್ದರೆ ನಿಮ್ಮ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ ಎಂಬುದನ್ನು ಗಮನಿಸಿ. ಇದಕ್ಕೆ ಏಕೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಬೇಕು' ಎಂದು ರಾಮುಲು ಕೇಳಿದರು.

ದೇಶದಲ್ಲಿ 75 ವರ್ಷಗಳಿಂದ ಕಾಂಗ್ರೆಸ್ ಗಿಮಿಕ್ ಮಾಡಿಕೊಂಡೇ ಬಂದಿದೆ. ನಿಮ್ಮ ಆಡಳಿತದ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಿಸಿ. ಬಳಿಕ ಇಲ್ಲಿ ಎತ್ತಿನ ಗಾಡಿ, ಸೈಕಲ್‍ನಲ್ಲಿ ಬನ್ನಿ. ಪ್ರತಿಭಟನೆ ನೆಪದಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News