×
Ad

ತೈಲ ಬೆಲೆ ಏರಿಕೆ ಮೂಲಕ ಜನರಿಗೆ ಮೋಸ ಮಾಡುತ್ತಿರುವ ಕೇಂದ್ರ ಸರಕಾರ: ಸಿದ್ದರಾಮಯ್ಯ

Update: 2021-09-13 21:23 IST

ಬೆಂಗಳೂರು, ಸೆ.13: ಕಚ್ಛಾ ತೈಲ ಬೆಲೆ ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ ಎಂಬ ನೆಪ ಹೇಳಿ ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರಕಾರ ಕೂಡಲೇ ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎತ್ತಿನ ಗಾಡಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಷ್ಟು ಇತ್ತು. ಈಗ ಎಷ್ಟು ಇದೆ ಎಂಬುದನ್ನು ಮಾಧ್ಯಮ ಪ್ರತಿನಿಧಿಗಳೇ ಪರಿಶೀಲಿಸಲಿ. ತೆರಿಗೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ನಿಜ ಹೇಳಲಿ. ಸತ್ಯವನ್ನೇಕೆ ಅವರು ಮುಚ್ಚಿಡಬೇಕು. ಜನರ ಮುಂದೆ ಅವರು ನಿಜಾಂಶ ವಿವರಿಸಲಿ. ಪೆಟ್ರೋಲ್ ದರ ಈಗ ಲೀಟರ್‍ಗೆ 106 ರೂ., ಡೀಸೆಲ್ ಬೆಲೆ 100 ರೂ.ಗಳ ವರೆಗೆ ಹೋಗಿದೆ. ಅಡುಗೆ ಅನಿಲ ದರ 900 ರೂ. ಆಗಿದೆ ಎಂದು ಅವರು ಕಿಡಿಗಾರಿದರು.

ವಾಜಪೇಯಿ ಅವರು 1973ರಲ್ಲಿ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ? ಆಗ ಪ್ರತಿಭಟನೆ ಮಾಡಿದವರು ಬಿಜೆಪಿಯವರಲ್ಲವೇ? ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿರುವ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇತಿಹಾಸ ಓದಿಕೊಳ್ಳಬೇಕು. ಆಗ ವಾಜಪೇಯಿಯವರು ಏಕೆ ಪ್ರತಿಭಟನೆ ಮಾಡಿದ್ದರು. ಜನ ಬೀದಿಗೆ ಇಳಿದಿದ್ದರೆ? ಯುಪಿಎ ಸರಕಾರದ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ನಾಯಕರು ತಲೆಯ ಮೇಲೆ ಸಿಲಿಂಡರ್ ಹೊತ್ತು ಧರಣಿ ಮಾಡಿರಲಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಜನರಿಗೆ ಅನ್ಯಾಯವಾಗಿದೆ ಎಂದು ಅವರು ಹೋರಾಟ ಮಾಡಿದ್ದರು. ಈಗ ಅವರು ಮಂತ್ರಿಯಾಗಿದ್ದಾರೆ ಎಂದು ಜನ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಬೇಕೆ? ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಅಲ್ಲಿಯ ಮುಖ್ಯಮಂತ್ರಿ ಕಡಿಮೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ತೆರಿಗೆ ಕಡಿತಗೊಳಿಸಲಿ ಎಂದು ಅವರು ಆಗ್ರಹಿಸಿದರು.

ಬೆಲೆ ಏರಿಕೆ ಬಗ್ಗೆ ಸದನದಲ್ಲಿ ನಾಳೆ ನಿಲುವಳಿ ಸೂಚನೆ ಮಂಡಿಸುತ್ತೇವೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ನಾನು ನಮ್ಮ ರಾಜ್ಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತೇನೆ. ಸಾಮಾಜಿಕ ಜಾಲ ತಾಣಗಳಲ್ಲಿ ಕೇಂದ್ರ, ರಾಜ್ಯ ಸರಕಾರವನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದನ್ನೂ ಬಿಜೆಪಿಯವರು ಗಮನಿಸುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಹೇಳಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಡೀಸೆಲ್ ಮೇಲಿನ ತೆರಿಗೆ 3.45 ರೂ. ಇತ್ತು. ಈಗ 31.74 ರೂ. ಆಗಿದೆ. ಅದೇ ರೀತಿ ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ 9.21 ರೂ.ಗಳಿಂದ 32.98 ರೂ.ಗಳಿಗೆ ಏರಿಕೆಯಾಗಿದೆ. ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆ ಆಗದಿದ್ದರೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ಜನರನ್ನು ವಂಚಿಸುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು.

ದೇಗುಲ ತೆರವಿಗೆ ಮುನ್ನ ಮಾಹಿತಿ ಕೊಡಬೇಕಿತ್ತು: ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ ಮಾಡುವ ಮುನ್ನ ಭಕ್ತರಿಗೆ ತಿಳಿಸಬೇಕಿತ್ತು. ದೇವಾಲಯ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನಾದರೂ ಕೊಡಬೇಕಿತ್ತು. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ದೇವಾಲಯಗಳನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶ ಇದೆ. ಆದರೆ, ಮಂದಿರ, ಮಸೀದಿ, ಚರ್ಚ್ ಯಾವುದೇ ಇರಲಿ, ತೆರವಿಗೆ ಮುನ್ನ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ದೇವಸ್ಥಾನ ಕೆಡವಿದ್ದು ಯಾವ ಸರಕಾರ. ಪ್ರತಾಪ್ ಸಿಂಹ ಪ್ರತಿನಿಧಿಸುವ ಪಕ್ಷದ ಸರಕಾರ ತಾನೆ. ಹೀಗಾಗಿ ಪ್ರತಾಪ್ ಸಿಂಹ ರಾಜೀನಾಮೆ ಕೊಟ್ಟು ಸರಕಾರದ ವಿರುದ್ಧ ಹೋರಾಟ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು.

ಮಹಿಳೆ ಮೇಲಿನ ದೌರ್ಜನ್ಯ ಖಂಡನೀಯ: ಯಾದಗಿರಿಯಲ್ಲಿ ಮಹಿಳೆ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಖಂಡನೀಯ. ಈ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಸಂಜೆ 7 ಗಂಟೆ ನಂತರ ಹೊರಗೆ ಹೋಗಿದ್ದೇಕೆ ಎಂದು ಗೃಹ ಸಚಿವರೇ ಹೇಳುತ್ತಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಅವರ ಹೇಳಿಕೆಯೇ ಸಾಬೀತು ಮಾಡುತ್ತದೆ. ಜೊತೆಗೆ ರಕ್ಷಣೆ ಕೊಡುವ ಶಕ್ತಿ ಸರಕಾರಕ್ಕೆ ಇಲ್ಲ ಎಂದು ಗೃಹ ಸಚಿವರೇ ಒಪ್ಪಿಕೊಂಡಂತೆ ಆಗಿದೆ ಎಂದು ಅವರು ತಿಳಿಸಿದರು.

ಗೃಹ ಸಚಿವರ ಕ್ಷೇತ್ರದಲ್ಲಿ ನಂದಿತಾ ಪ್ರಕರಣ ನಡೆದಾಗ ಗೃಹ ಸಚಿವರು ರಾಜಿನಾಮೆ ಕೊಡಬೇಕು ಎಂದು ಇಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದರು. ಆಗ ನಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದೆವು. ಒಟ್ಟು ಆರು ಪ್ರಕರಣಗಳನ್ನು ನಮ್ಮ ಸರಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದೆವು. ಇವರು ಒಂದಾದರೂ ವಹಿಸಿದ್ದಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News