×
Ad

'ಹಿಂದಿ ದಿವಸ್' ವಿರೋಧಿಸಿ #StopHindiImposition ಆನ್ ಲೈನ್ ಅಭಿಯಾನ

Update: 2021-09-14 11:05 IST

photo: twitter@shrikanthtelagi
 

ಬೆಂಗಳೂರು: ಸೆಪ್ಟಂಬರ್ 14ರ (ಇಂದು) 'ರಾಷ್ಟೀಯ ಹಿಂದಿ ದಿವಸ್' ಆಚರಣೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ರಾಜ್ಯದಲ್ಲೂ Stop HindiImposition ಹ್ಯಾಶ್ ಟ್ಯಾಗ ನಲ್ಲಿ ಆನ್ ಲೈನ್ ಅಭಿಯಾನ ನಡೆಯುತ್ತಿದೆ. 

'ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು, ಹಿಂದಿ ದಿವಸ ಆಚರಣೆ ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ' ಎಂದು ಸೋಮವಾರ ಟ್ವೀಟ್ ಮೂಲಕ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಇದೀಗ ನಟ ಚೇತನ್ ಅಹಿಂಸಾ ಕೂಡ ಟ್ವೀಟ್ ಮಾಡಿದ್ದು, ಇಂದು, ಸೆಪ್ಟೆಂಬರ್ 14ನೇ ತಾರೀಖನ್ನು ಹಿಂದಿ ದಿವಸವೆಂದು ನಮ್ಮ ಸಂವಿಧಾನದ 343ನೇ ಆರ್ಟಿಕಲ್ ಪ್ರಕಾರ ಗುರುತಿಸಲಾಗಿದ್ದು, ಇದು ಹಿಂದಿಯನ್ನು ನಮ್ಮ ರಾಷ್ಟ್ರದ ಅಧಿಕೃತ ಭಾಷೆಯೆಂದು ಪರಿಗಣಿಸುತ್ತದೆ ಎಂದು ತಿಳಿಸಿದ್ದಾರೆ. 

ಇಂತಹ ಭಾಷಾ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಹಿಂದಿ ಪ್ರಾಮುಖ್ಯತೆಯನ್ನು ನಿಲ್ಲಿಸಿ, 8ನೇ ವೇಳಾಪಟ್ಟಿಯಲ್ಲಿರುವ ಎಲ್ಲಾ 22 ಭಾಷೆಗಳನ್ನೂ ಕೂಡ ಅಧಿಕೃತ ಭಾಷೆಯೆಂದು ಗುರುತಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ . 

ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವರು ಕನ್ನಡ ಭಾಷೆಯನ್ನು ಬೆಂಬಲಿಸಿ 'ರಾಷ್ಟೀಯ ಹಿಂದಿ ದಿವಸ್' ವಿರೋಧಿಸಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. 

''ಕನ್ನಡ ಕನ್ನಡ ಕನ್ನಡವೆಂದುಲಿ ಕನ್ನಡ ನಾಡಿನ ಓ ಕಂದ ಕನ್ನಡ ನಾಡಿನ ಕೀರ್ತಿಯ ಹಬ್ಬಿಸು ಕನ್ನಡ ತಾಯಿಗೆ ಆನಂದ. (ಬಾಲ್ಯದಲ್ಲಿ ಓದಿದ ಪದ್ಯ) ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು'' ಎಂದು ನಟ ಡಾಲಿ ದನಂಕಯ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News