×
Ad

ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ: ಎಚ್.ಡಿ ಕುಮಾರಸ್ವಾಮಿ

Update: 2021-09-14 15:06 IST
ಎಚ್.ಡಿ ಕುಮಾರಸ್ವಾಮಿ 

ಬೆಂಗಳೂರು: ಮೈಸೂರಿನ ನಂಜನಗೂಡಿನ ಪುರಾತನ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು,  'ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಮೈಸೂರು ಜಿಲ್ಲೆಯ 93 ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ. ಒಂದು ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದೇ? ಒಂದೆಡೆ ದೇಗುಲಗಳ ಧ್ವಂಸ ನಡೆಯುತ್ತಿದೆ. ಇನ್ನೊಂದೆಡೆ ಆಡಳಿತ ಪಕ್ಷದ ಮಿತ್ರಸಂಘಟನೆ ಹಿಂದೂ ಜಾಗರಣ ವೇದಿಕೆ ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಇದರ ಅರ್ಥವೇನು? ದೇಗುಲಗಳ ಧ್ವಂಸ ಮತ್ತು ಪ್ರತಿಭಟನೆ ಹಿಂದೆ ಬಿಜೆಪಿ ಇದೆ ಎಂಬ ಅನುಮಾನ ಕಾಡುತ್ತಿದೆ. ಸರಕಾರ ಮನಸ್ಸು ಮಾಡಿದರೆ ತಕ್ಷಣವೇ ದೇಗುಲಗಳ ನೆಲಸಮ ನಿಲ್ಲಿಸಬಹುದು. ಸರಕಾರ ಅದನ್ನು ಮಾಡುತ್ತಿಲ್ಲ. ಹಿಂದುಗಳ ರಕ್ಷಣೆಯ ಪೇಟೆಂಟ್ ಪಡೆದು ರಾಜಕಾರಣ ಮಾಡುವ ಭಾರತೀಯ ಜನತಾ ಪಕ್ಷದ ಸರಕಾರವೇ ರಾಜ್ಯದಲ್ಲಿದೆ' ಎಂದಿದ್ದಾರೆ. 

ಹಾಗಾದರೆ, ದೇವಾಲಯಗಳನ್ನೇಕೆ ನೆಲಸಮ ಮಾಡಲಾಗುತ್ತಿದೆ? ಸರಕಾರವೇ ಇದಕ್ಕೆ ಉತ್ತರ ನೀಡಬೇಕು.ಸರಕಾರಕ್ಕೆ ನಿಜಕ್ಕೂ ದೇಗುಲ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸುಪ್ರೀಂ ಕೊರ್ಟ್ʼಗೆ ಮೇಲ್ಮನವಿ ಸಲ್ಲಿಸಲಿ. ಎಲ್ಲ ಪಕ್ಷಗಳನ್ನು ಕರೆದು ಚರ್ಚೆ ನಡೆಸಲಿಎಂದು ಒತ್ತಾಯಿಸಿರುವ ಅವರು,  'ಅದನ್ನು ಬಿಟ್ಟು ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಮಾಡುವುದು ಬೇಡ. ದೇವಾಲಯಗಳಿಗೆ ರಕ್ಷಣೆ ನೀಡಲು ಸರಕಾರ ಸಂಪೂರ್ಣ ವಿಫಲವಾಗಿದೆ. ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದೆ. ಜನರ ಗಮನ ಬೇರೆಡೆಗೆ ಸೆಳೆಯಲು ಸರಕಾರವೇ ಈ ನಾಟಕ ಆಡುತ್ತಿದೆಯಾ ಎಂಬ ಸಂಶಯ ಉಂಟಾಗುತ್ತಿದೆ. ಇದೂ ಬಿಜೆಪಿಯ ಕಾರ್ಯಸೂಚಿಯೇ?' ಎಂದು ಪ್ರಶ್ನಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News