ಕೋಟ್ಯಂತರ ರೂ. ವಂಚನೆ ಆರೋಪ: ಯಡಿಯೂರಪ್ಪ ಕುಟುಂಬದ ವಿರುದ್ಧ ಎಸಿಬಿಗೆ ದೂರು

Update: 2021-09-14 12:27 GMT

ಬೆಂಗಳೂರು, ಸೆ.14: ಕೋಟ್ಯಂತರ ರೂಪಾಯಿ ವಂಚನೆಗೈದಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಎಸಿಬಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು ಸಲ್ಲಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಕುಟುಂಬದ ಒಡೆತನದ ದವಳಗಿರಿ ಡೆವಲಪರ್ಸ್ ಅಸ್ತಿತ್ವದಲ್ಲೇ ಇಲ್ಲದ ಜಮೀನುಗಳಿಗೆ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು ಮೆಟ್ರೋ ರೈಲು ನಿಗಮದಿಂದ 22.92 ಕೋಟಿ ರೂ.ಪರಿಹಾರ ಪಡೆದು ವಂಚನೆ ಮಾಡಿರುವುದಾಗಿ ಅವರು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಇಲ್ಲಿನ ನಾಗವಾರ ಬಳಿ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಿಂದ ಬಶೀರ್ ಎಂಬುವರು ಪಡೆದಿದ್ದ ನಿವೇಶನದ ಜತೆಗೆ ಪಕ್ಕದ ರಸ್ತೆಯನ್ನೂ ವಿಲೀನ ಕೋರಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ತದನಂತರ, ಈ ಅರ್ಜಿಯನ್ನು ಮೂರು ಬಾರಿ ಬಿಡಿಎ ತಿರಸ್ಕರಿಸಿತ್ತು.

ಆದರೂ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಿಲೀನಗೊಳಿಸಲಾಗಿತ್ತು. ನಂತರ ರಸ್ತೆ ಸೇರಿ 13.1 ಗುಂಟೆ ಭೂಮಿಯನ್ನು ಬಶೀರ್ ಬಳಿ ಶೇಖರಪ್ಪ ಎಂಬವರು ಖರೀದಿಸಿ ನಂತರ ಧವಳಗಿರಿ ಡೆವಲಪರ್ಸ್‍ಗೆ ಮಾರಾಟ ಮಾಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾಗವಾರ ಹೋಬಳಿಯಲ್ಲಿನ 13.1 ಗುಂಟೆ ಭೂಮಿಯನ್ನು ಮಾರಾಟ ಮಾಡುವ ವೇಳೆ ಅಲ್ಲಿನ ಸರ್ವೇ ಸಂಖ್ಯೆ 100ರಲ್ಲಿ ಸೇರಿಸಿ 25 ಸಾವಿರ ಚ.ಅಡಿ ಜಮೀನನ್ನು ಚೆಂಗಪ್ಪ ಹಾಗೂ ಕಮಲ್ ಪಾಷಾ ಎಂಬುವರು ಮಾರಾಟ ಮಾಡಿದಂತೆ ಕ್ರಮ ಪತ್ರ ಮಾಡಲಾಗಿದೆ ಎಂದು ಆಪಾದಿಸಿದರು.

ಆದರೆ, ವಾಸ್ತವದಲ್ಲಿ ಸರ್ವೇ ಸಂಖ್ಯೆ 100ರಲ್ಲಿ ಜಮೀನು ಇರಲೇ ಇಲ್ಲ. ಹಾಗಿದ್ದರೂ, ಈ ಎಲ್ಲ ಭೂಮಿಯನ್ನು ಮೆಟ್ರೋ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬಂತೆ ದಾಖಲೆಗಳನ್ನು ಸೃಷ್ಟಿಸಿ ಧವಳಗಿರಿ ಡೆವಲಪರ್ಸ್ 22 ಕೋಟಿ ಪರಿಹಾರ ಪಡೆದಿದೆ ಎಂದು ಅಬ್ರಹಾಂ ಆರೋಪಿಸಿದ್ದಾರೆ.

ಈ ಪ್ರಕರಣವನ್ನು ಎಸಿಬಿ ಗಂಭೀರವಾಗಿ ಪರಿಗಣಿಸಿ ವಂಚನೆ ಕೃತ್ಯದಲ್ಲಿ ಕೈಜೋಡಿಸಿದ ಬಿ.ಎಸ್.ಯಡಿಯೂರಪ್ಪ, ಇವರ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ, ಅಳಿಯ ಸೋಹನ್‍ಕುಮಾರ್, ಹೊನ್ನಪ್ಪ ನಿಶಿತ್ ಎಂಬುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News