ಡಿಸೆಂಬರ್ ಅಂತ್ಯದೊಳಗೆ ಬೆಂಗಳೂರಿನಲ್ಲಿ 3ಲಕ್ಷ ಎಲ್‍ಇಡಿ ಬೀದಿ ದೀಪ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-14 12:37 GMT

ಬೆಂಗಳೂರು, ಸೆ. 14: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಮೂರು ಲಕ್ಷ ಎಲ್‍ಇಡಿ ಬೀದಿ ದೀಪ ಅಳವಡಿಸಲು ಸೂಚನೆ ನೀಡಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಆರ್.ಮಂಜುನಾಥ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಐದು ಹಂತದಲ್ಲಿ ಎಲ್‍ಇಡಿ ಬಲ್ಪ್ ಅಳವಡಿಕೆ ನಡೆಯಲಿದ್ದು, ರಾಜರಾಜೇಶ್ವರಿ ನಗರ, ದಾಸರಹಳ್ಳಿ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಐದೂ ವಲಯಗಳಲ್ಲಿಯೂ ಏಕಕಾಲಕ್ಕೆ ಪ್ರಾರಂಭಿಸಲು ಸೂಚಿಸಲಾಗುವುದು ಎಂದು ಹೇಳಿದರು.

ಒಂದು ವೇಳೆ ನಿಗದಿತ ಸಮಯದಲ್ಲಿ ಎಲ್‍ಇಡಿ ಬಲ್ಪ್ ಅಳವಡಿಸದಿದ್ದರೆ ಈಗಾಗಲೆ ಆಗಿರುವ ಕರಾರನ್ನು ಮರು ಪರಿಶೀಲನೆ ಮಾಡಲಾಗುವುದು. ಕಾಲಮಿತಿಯಲ್ಲಿ ಬೀದಿ ದೀಪ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ವಾರಕ್ಕೆ 1 ಲಕ್ಷ ರೂ. ದಂಡ ವಿಧಿಸುವ ಕರಾರು ಇದೆ ಎಂದು ತಿಳಿಸಿದರು.

2018ರಲ್ಲಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡುಗಳಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು ಎಲ್‍ಇಡಿ ಬಲ್ಪ್ ಅಳವಡಿಸುವ ಪ್ರಕ್ರಿಯೆ ಪ್ರಾರಂಭವಾದರೂ ಅನುಮೋದನೆಯಾಗಿದ್ದು 2019ರಲ್ಲಿ. ಎರಡು ವರ್ಷಗಳ ಕಾಲ ಅನುಮೋದನೆ, ಗುತ್ತಿಗೆ ನೀಡುವುದರಲ್ಲೇ ಕಳೆದು ಹೋಗಿದೆ. ಹಲವು ಕಡೆ ಕತ್ತಲು (ಡಾರ್ಕ್‍ಸ್ಪಾಟ್) ಸೃಷ್ಟಿಯಾಗಿದೆ ಎಂದರು.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಶೇ.85.5ರಷ್ಟು ಗರಿಷ್ಠ ವಿದ್ಯುತ್ ಉಳಿಸುವ ಉದ್ದೇಶದಿಂದ ಶಾರ್‍ಪುರ್‍ಜಿ-ಪಲೊಂಜಿ ಕಂಪೆನಿ, ಎನ್‍ಎಂಸಿ ಇನ್‍ಫ್ರಾಸ್ಟ್ರಕ್ಚರ್ ಪ್ರೈ ಲಿಮಿಟೆಡ್ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್‍ಗೆ ಗುತ್ತಿಗೆ ವಹಿಸಲಾಗಿದೆ. ಯೋಜನೆಯ ಒಪ್ಪಂದದ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 4.85ಲಕ್ಷಕ್ಕೂ ಅಧಿಕ ಬೀದಿ ದೀಪಗಳನ್ನು ಐದು ಹಂತ, 30 ತಿಂಗಳಲ್ಲಿ ಅಳವಡಿಸಬೇಕಿದೆ ಎಂದರು.

ವಿದ್ಯುತ್ ಉಳಿತಾಯದ ಮಹತ್ವದ ಯೋಜನೆ ಇದಾಗಿದ್ದು, ಬೀದಿ ದೀಪ ಅಳವಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಸುಮಾರು 642 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಹೊರೆಯಾಗಿದೆ. ಈ ಹಣವನ್ನು ಗುತ್ತಿಗೆ ಪಡೆದ ಕಂಪೆನಿಗಳಿಂದ ವಸೂಲಿ ಮಾಡಬೇಕು ಎಂದು ಶಾಸಕ ಮಂಜುನಾಥ್ ಸರಕಾರಕ್ಕೆ ಸಲಹೆ ಮಾಡಿದರು.

ಹಿರಿಯ ಸದಸ್ಯರಾದ ರಾಮಲಿಂಗಾರೆಡ್ಡಿ, ರವಿಸುಬ್ರಹ್ಮಣ್ಯ ಹಾಗೂ ಅರವಿಂದ ಲಿಂಬಾವಳಿ, ನಗರದಲ್ಲಿ ಬೀದಿ ದೀಪ ಅಳವಡಿಸಲು ವಿಳಂಬ ಮಾಡುತ್ತಿದ್ದು, ಇದರಿಂದ ಬೆಂಗಳೂರು ನಗರ ಸೇರಿದಂತೆ ಹೊರ ವಲಯದ ಹಲವು ಪ್ರದೇಶಗಳಲ್ಲಿ ಬೀದಿ ದೀಪಗಳೇ ಇಲ್ಲ. ಆದುದರಿಂದ ಬೀದಿ ದೀಪಗಳ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News