ಚಿಕ್ಕಮಗಳೂರು: ಹಿಂದಿ ದಿವಸ್ ಆಚರಣೆ, ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಕನ್ನಡಸೇನೆ ಧರಣಿ

Update: 2021-09-14 12:55 GMT

ಚಿಕ್ಕಮಗಳೂರು, ಸೆ.14: ಕೇಂದ್ರ ಸರಕಾರ ಆಡಳಿತದಲ್ಲಿ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುತ್ತಿದೆ. ಇದರಿಂದ ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಕನ್ನಡ ಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಕಪ್ಪು ಪಟ್ಟಿ ಧರಿಸಿ ಅರೆಬೆತ್ತಲೆಯಾಗಿ ಧರಣಿ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಮುಖಂಡರು, ಕಾರ್ಯಕರ್ತರು ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆಯನ್ನು ರಾಜ್ಯ ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಭಾರತ ದೇಶವು ಬಹು ಧರ್ಮಗಳ, ಬಹು ಸಂಸ್ಕøತಿ ಹಾಗೂ ಬಹು ಭಾಷೆಗಳ ತವರೂರಾಗಿದೆ. ಇಂತಹ ನಾಡಿನಲ್ಲಿ ಎಲ್ಲ ಧರ್ಮಗಳ, ಬಹು ಭಾಷೆಯ ಜನರು ವಿವಿಧತೆಯಲ್ಲಿ ಏಕತೆ ಎಂಬ ತತ್ವದಡಿಯಲ್ಲಿ ಬದುಕುತ್ತಿದ್ದಾರೆ. ಆದರೆ ಕೇಂದ್ರದ ಬಿಜೆಪಿ ಸರಕಾರ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹೇಳುತ್ತಾ ಎಲ್ಲ ರಾಜ್ಯಗಳ ಮೇಲೂ ಹಿಂದಿ ಹೇರಿಕೆಯನ್ನು ಬಲವಂತದಿಂದ ಹೇರಲು ಮುಂದಾಗಿದೆ. ಇದಕ್ಕಾಗಿ ಸೆ.14ರ ದಿನವನ್ನು ದೇಶಾದ್ಯಂತ ಹಿಂದಿ ದಿವಸ್ ಆಚರಣೆಗೆ ಕರೆ ನೀಡಿದೆ. ಇದು ಸಂವಿಧಾನ ವಿರೋಧಿ ನಿಲುವಾಗಿದೆ ಆದರೆ ದೇಶಕ್ಕೆ ನಿರ್ದಿಷ್ಟವಾದ ರಾಷ್ಟ್ರಭಾಷೆ ಎಂಬುದಿಲ್ಲ. ಆಯಾ ರಾಜ್ಯಗಳ ಭಾಷೆಗೆ ಆಯಾ ರಾಜ್ಯಗಳು ಆಧ್ಯತೆ ನೀಡಬೇಕೆಂದು ಸಂವಿಧಾನದಲ್ಲೇ ಹೇಳಾಗಿದೆ. ಕೇಂದ್ರ ಸರಕಾರ ಹಿಂದಿ ಹೇರಿಕೆ ಮೂಲಕ ಸಂವಿಧಾನ ವಿರೋಧಿ ನಿಲುವು ತಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಾದ್ಯಂತ ಆಯಾ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯಲ್ಲೇ ಆಡಳಿತ, ವ್ಯವಹಾರ ನಡೆಸಲು ಹಾಗೂ ಸ್ಥಳೀಯ ಭಾಷೆಗೆ ಆಧ್ಯತೆ ನೀಡಲು ಅವಕಾಶ ನೀಡುವ ಮೂಲಕ ಎಲ್ಲ ಭಾಷೆಗಳಿಗೂ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿದೆ. ಕನ್ನಡ ಭಾಷೆಯಂತೆ ಹಿಂದಿಯೂ ಒಂದು ಪ್ರಾದೇಶಿಕ ಭಾಷೆಯಾಗಿದೆ. ಆದರೆ ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಎಲ್ಲ ರಾಜ್ಯಗಳ ಮೇಲೆ ಹೇರಿಕೆ ಮಾಡಲು ಮುಂದಾಗಿದೆ. ಈ ಮೂಲಕ ಪ್ರಾದೇಶಿಕ ಭಾಷೆಗಳ ನಾಶಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಟೀಕಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ರಾಜ್ಯದಲ್ಲಿ ಹಿಂದಿ ಹೇರಿಕೆಗೆ ರಾಜ್ಯ ಸರಕಾರ ಅವಕಾಶ ನೀಡಬಾರದು. ಹಿಂದಿ ದಿವಸ್ ಆಚರಣೆಯನ್ನೇ ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಸೆ.14ರಂದು ಹಿಂದಿ ದಿವಸ್ ಎಂದು ಘೋಷಣೆ ಮಾಡಿರುವುದು ಅಸಂವಿಧಾನಿಕವೂ, ಅವೈಜ್ಞಾನಿಕವೂ ಆಗಿದೆ. ಹಿಂದಿ ದಿವಸ್ ಮೂಲಕ ಪ್ರಾದೇಶಿಕ ಭಾಷೆಗಳ ಅವನತಿಗೆ ನಾಂದಿ ಹಾಡುತ್ತಿದೆ. ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವ ಕೇಂದ್ರದ ನಿಲುವು ಸರಿಯಲ್ಲ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ ಎಂದ ಅವರು ಕೇಂದ್ರ ಸರಕಾರದ ಹಿಂದಿ ಹೇರಿಕೆಗೆ ರಾಜ್ಯ ಸರಕಾರ ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಹೋರಾಟ ಉಗ್ರರೂಪ ತಳೆಯಲಿದೆ ಎಂದು ಎಚ್ಚರಿಸಿದರು.

ಮುಖಂಡರಾದ ಶಂಕರೇಗೌಡ, ರಂಜನ್‍ಗೌಡ, ಜಯಪ್ರಕಾಶ್, ಪ್ರಕಾಶ್, ಸಿಂಚನ್, ಕಳವಾಸೆ ರವಿ, ಹಿರೇಬೈಲ್ ಜಗದೀಶ್, ಯೋಗೇಶ್ ಸೇರಿದಂತೆ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು. ಧರಣಿ ಬಳಿಕ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News