ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ತನಿಖೆಗೆ ತಜ್ಞರ ಸಮಿತಿ ರಚನೆ: ಸಚಿವ ಎಸ್.ಟಿ.ಸೋಮಶೇಖರ್

Update: 2021-09-14 13:48 GMT

ಬೆಂಗಳೂರು, ಸೆ. 14: ನಗರದ ಬಸವನಗುಡಿಯ ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್ ಬಹುಕೋಟಿ ಹಗರಣ ತನಿಖೆಗೆ ತಜ್ಞರ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್‍ನ ಯು.ಬಿ.ವೆಂಕಟೇಶ್ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಯ ಪ್ರಸ್ತಾವಕ್ಕೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್, ಸದಸ್ಯ ಎಸ್.ರವಿ ಸೇರಿದಂತೆ ಹಲವು ಸದಸ್ಯರು ಧ್ವನಿಗೂಡಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಬ್ಯಾಂಕ್‍ನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ನಡಿ ತನಿಖೆ ನಡೆಯುತ್ತಿದೆ. ಈ ಸಂಬಂಧ ಆರ್‍ಬಿಐ ಜತೆ ಚರ್ಚಿಸಿ ತಜ್ಞರ ಸಮಿತಿ ರಚನೆ ಮಾಡಲು ಸರಕಾರ ಸಿದ್ಧವಿದೆ ಎಂದು ತಿಳಿಸಿದರು. 

ಬ್ಯಾಂಕ್‍ನಲ್ಲಿ ನಡೆದ ಅವ್ಯವಹಾರ ಪ್ರಕರಣದಿಂದ ರಾಜ್ಯದ ಇಡೀ ಸಹಕಾರ ಬ್ಯಾಂಕ್‍ಗಳಿಗೆ ಕಪ್ಪು ಚುಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಈಗಾಗಲೇ ಸಿಓಡಿ ತನಿಖೆ ನಡೆಯುತ್ತಿದೆ. ಈ ಕಾರಣಕ್ಕಾಗಿ ಸಿಬಿಐ ತನಿಖೆಗೆ ಒಪ್ಪಿಸಿಲ್ಲ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಗುರುರಾಘವೇಂದ್ರ ಸಹಕಾರ ಬ್ಯಾಂಕ್‍ನಿಂದ ಆಗಿರುವ ಅವ್ಯವಹಾರ ಪ್ರಕರಣ ಸಹಕಾರ ಇಲಾಖೆಗೆ ಮುಜುಗರ ತರಿಸಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‍ನ್ನು ಸೂಪರ್ ಸೀಡ್ ಮಾಡಲಾಗಿದೆ. ಅಲ್ಲಿನ ನಿರ್ದೇಶಕರು, ಲೆಕ್ಕ ಪರಿಶೋಧಕರು, ಸಿಬ್ಬಂದಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇದುವರೆಗೂ 192 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ್ದು, ಇನ್ನೂ 870 ಕೋಟಿ ರೂ. ಆಸ್ತಿ ಜಪ್ತಿ ಮಾಡಲು ಅಂದಾಜು ಆಸ್ತಿ ಮೌಲ್ಯಮಾಪನ ಮಾಡಲಾಗಿದೆ ಎಂದು ತಿಳಿಸಿದರು. 

ಇದುವರೆಗೂ 22,653 ಗ್ರಾಹಕರಿಗೆ ಆರ್‍ಬಿಐ ಸೂಚನೆ ಮೇರೆಗೆ 290.80 ಕೋಟಿ ಠೇವಣಿ ಹಿಂದಿರುಗಿಸಲಾಗಿದೆ. ಮರು ಲೆಕ್ಕ ಪರಿಶೀಲನೆಗೆ ಆದೇಶ 2014-15 ರಿಂದ 2018-19ರ ತನಕ ಬ್ಯಾಂಕ್‍ನ ಸಂಪೂರ್ಣ ವ್ಯವಹಾರವನ್ನು ಮರು ಲೆಕ್ಕ ಪರಿಶೋಧನೆ ಮಾಡಲು ಆದೇಶಿಸಲಾಗಿದೆ. ಬ್ಯಾಂಕ್‍ನಲ್ಲಿ ಇದುವರೆಗೂ 1,923 ಕೋಟಿ ರೂ. ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದರು. 

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಯು.ಬಿ. ವೆಂಕಟೇಶ್, ಬ್ಯಾಂಕ್‍ನಲ್ಲಿ 46 ಸಾವಿರ ಗ್ರಾಹಕರು ಇಟ್ಟಿದ್ದ ಠೇವಣಿ ಹಣ ಅವ್ಯವಹಾರವಾಗಿದೆ. ಒಂದೂವರೆ ವರ್ಷ ಕಳೆದರೂ ಸರಕಾರ ನಿರ್ದೇಶಕರು, ಸಿಬ್ಬಂದಿಗಳು, ಲೆಕ್ಕ ಪರಿಶೋಧಕರ ಮೇಲೆ ಕ್ರಮ ಕೈಗೊಂಡು ಅವರ ಆಸ್ತಿ ಜಪ್ತಿಗೆ ಮುಂದಾಗದಿರುವುದನ್ನು ನೋಡಿದರೆ ಸರಕಾರವೂ ಶಾಮೀಲಾಗಿರಬಹುದು ಎಂಬ ಅನುಮಾನ ಮೂಡಲಿದೆ. ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದ್ದರೂ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News