×
Ad

ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ: ಸಿದ್ದರಾಮಯ್ಯ

Update: 2021-09-14 19:49 IST

ಬೆಂಗಳೂರು: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುವುದನ್ನು ವಿರೋಧಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಸರಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,  'ಮುಖ್ಯಮಂತ್ರಿಗಳೇ  ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡ ಬೇಡಿ. ಪ್ರತಿಭಟನಾ ನಿರತ ವಿದ್ಯಾರ್ಥಿ ಗಳಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಮೊದಲು ಹೊಸ ಶಿಕ್ಷಣ ನೀತಿಯ ಜಾರಿಯನ್ನು ಸ್ಥಗಿತಗೊಳಿಸಿ. ವಿದ್ಯಾರ್ಥಿಗಳು,ಹೆತ್ತವರು ಹಾಗೂ ಶಿಕ್ಷಕರ ಜೊತೆ ಚರ್ಚಿಸಿ ನಂತರ ತೀರ್ಮಾನಕ್ಕೆ ಬನ್ನಿ' ಎಂದು ಒತ್ತಾಯಿಸಿದ್ದಾರೆ.

''ಹೊಸ ಶಿಕ್ಷಣ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ವಿದ್ಯಾರ್ಥಿಗಳಿಗೆ ಮೋಸದ ಅರಿವಾಗಿ ಬೀದಿಗಿಳಿದಿದ್ದಾರೆ. ಮುಖ್ಯಮಂತ್ರಿಗಳೇ ಪೊಲೀಸರ ಲಾಠಿಯಿಂದ ಪ್ರತಿಭಟನೆ ಹತ್ತಿಕ್ಕಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ'' ಎಂದು ಹೇಳಿದ್ದಾರೆ.

''ಎನ್ ಇಪಿ ಯನ್ನು ಒಂದು ವರ್ಷ ಮುಂದೂಡುವಂತೆ ನಾನು ಮಾಡಿದ್ದ ಮನವಿಗೆ ಬಿಜೆಪಿ ಸರ್ಕಾರ ಗಮನ ಕೊಡಲಿಲ್ಲ. ಈಗ ಅದೇ ಹೊಸ ಶಿಕ್ಷಣ ನೀತಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದು, ಅಮಾಯಕ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಬೆಂಬಲಕ್ಕೆ ಸದಾ ನಾನಿದ್ದೇನೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News