ಆದಿವಾಸಿ ಕುಟುಂಬಗಳಿಗೆ ಹೆಚ್ಚುವರಿ ಸೀಮೆಎಣ್ಣೆ ವಿತರಣೆಗೆ ಕ್ರಮ: ಸಚಿವ ಉಮೇಶ್ ಕತ್ತಿ

Update: 2021-09-14 16:17 GMT

ಬೆಂಗಳೂರು, ಸೆ. 14: ರಾಜ್ಯದ ಗ್ರಾಮಾಂತರ ಪ್ರದೇಶ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಆದಿವಾಸಿಗಳ ಕುಟುಂಬಗಳಿಗೆ ಬೆಳಕಿಗಾಗಿ ದೀಪ ಉರಿಸಲು ಅಗತ್ಯವಿರುವ ಹೆಚ್ಚುವರಿ ಸೀಮೆಎಣ್ಣೆಯನ್ನು ಸ್ಥಳೀಯವಾಗಿ ಪರವಾನಿಗೆ ನೀಡಿ, ಆ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ಮಂಗಳವಾರ ನಿಯಮ 72ರ ಅಡಿ ಸದಸ್ಯ ಶಾಂತಾರಾಮ್ ಬುಡ್ನ ಸಿದ್ದಿ ವಿಷಯ ಪ್ರಸ್ತಾಪಿಸಿ, ಬೆಳಕಿಗಾಗಿ ನೀಡಲಾಗುತ್ತಿರುವ ಒಂದು ಲೀ. ಸೀಮೆಎಣ್ಣೆ ಸಾಕಾಗುತ್ತಿಲ್ಲ. ಇದರಿಂದ ಗ್ರಾಮಾಂತರ ಪ್ರದೇಶ ಮತ್ತು ಅರಣ್ಯಗಳಲ್ಲಿ ವಾಸಿಸುವ ಆದಿವಾಸಿ ಮಕ್ಕಳ ಓದಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ, ಇಲಾಖೆ ನೀಡುವ ಸೀಮೆ ಎಣ್ಣೆ ಪ್ರಮಾಣವನ್ನು ಕನಿಷ್ಠ 3 ಲೀ.ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಉಮೇಶ್ ಕತ್ತಿ, ರಾಜ್ಯದಲ್ಲಿ ಈಗಾಗಲೇ ಉಜ್ವಲ, ಅನಿಲ ಭಾಗ್ಯ ಯೋಜನೆಗಳಡಿ ಅನಿಲ ಸಂಪರ್ಕ ನೀಡಲಾಗಿದೆ. ಇನ್ನೂ 86 ಸಾವಿರ ಮನೆಗಳಿಗೆ ಅನಿಲ ಸಂಪರ್ಕ ನೀಡಬೇಕಿದೆ. ಬೆಳಕಿಗಾಗಿ ನೀಡುವ ಒಂದು ಲೀ. ಸೀಮೆಎಣ್ಣೆ ಜತೆಗೆ ಹೆಚ್ಚುವರಿಯಾಗಿ ನೀಡಲು ಖಾಸಗಿ ವ್ಯಕ್ತಿಗಳಿಗೆ ಪರವಾನಿಗೆ ನೀಡಿ, ಅವರ ಮೂಲಕ 35 ರೂ.ಗೆ ಲೀಟರ್‍ನಂತೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಸ್ತುತ ಪ್ರತಿ ತಿಂಗಳು ಕೇಂದ್ರದಿಂದ ರಾಜ್ಯಕ್ಕೆ ಕೇವಲ 2,480 ಕಿಲೋ ಲೀಟರ್ ಸೀಮೆಎಣ್ಣೆ ಹಂಚಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಕಿಗಾಗಿ ದೀಪ ಉರಿಸುವ ಉದ್ದೇಶಕ್ಕಾಗಿ 24.87 ಲಕ್ಷ ಪಡಿತರ ಕುಟುಂಬಗಳಿಗೆ ತಲಾ ಒಂದು ಲೀ.ನಂತೆ ಸೀಮೆಎಣ್ಣೆ ಹಂಚಿಕೆ ಮಾಡಲಾಗುತ್ತಿದೆ. ಇನ್ನು ಪ್ರತಿ ಆದ್ಯತಾ ಪಡಿತರ ಚೀಟಿಗೆ 3 ಲೀ. ಸೀಮೆಎಣ್ಣೆ ವಿತರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡುಗೆ ಸಂಪರ್ಕ ಹೊಂದಿರದ 11,658 ಕುಟುಂಬಗಳಿದ್ದು, ಅವುಗಳಿಗೆ ಪ್ರತಿ ತಿಂಗಳು 34,974 ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News