ಹಿಂದಿ ಹೇರಿಕೆ ವಿರೋಧಿಸಿ ಶಿವಮೊಗ್ಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Update: 2021-09-14 18:44 GMT

ಶಿವಮೊಗ್ಗ,ಸೆ.14: ಕರ್ನಾಟಕದಲ್ಲಿ ಜಾರಿಗೆ ತಂದಿರುವ ಹಿಂದಿ ಕಲಿಯುವ ಭಾಷಾಸೂತ್ರವನ್ನು ತಡೆಹಿಡಿಯಲು ಆಗ್ರಹಿಸಿ  ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರದ ಅಜೆಂಡಾದ ಹಿಂದೆ ಹಿಂದಿ ಹೇರಿಕೆ ಇದೆ. 73 ವರ್ಷಗಳಿಂದ ತೆಪ್ಪಗೆ ಕುಳಿತಿದ್ದ ಹಿಂದಿವಾದಿಗಳ ಮೂಲಕ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಬಾರದು. ಇದು ದೇಶದ ಐಕ್ಯತೆಯನ್ನ ಕಸಿದುಕೊಳ್ಳುತ್ತದೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಈ ಹೇರಿಕೆಯಿಂದ ಮತೀಯವಾದ ಕಾಣಿಸಿಕೊಳ್ಳುತ್ತದೆ. ಹಿಂದುತ್ವದ ಹೆಸರಲ್ಲಿ ಮತ ಕೇಳುವ ಕೇಂದ್ರ ಸರ್ಕಾರವನ್ನು ಕುರುಡರಂತೆ ನಂಬುವ ಮೂಲಕ ತಮ್ಮ ಅಸ್ತಿತ್ವಕ್ಕೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಸೆಪ್ಟಂಬರ್ 14ರಂದು ರಾಷ್ಟ್ರೀಯ ಹಿಂದಿ ದಿವಸ್ ಆಚರಣೆಯನ್ನು ಖಂಡಿಸಿ ನಮ್ಮ ವೇದಿಕೆ ಹಿಂದಿ ವಿರೋಧಿ ದಿನವನ್ನಾಗಿ ಜಿಲ್ಲಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಜಾರಿಗೆ ತಂದಿರುವ ಹಿಂದಿ ಕಲಿಯುವ ಭಾಷಾಸೂತ್ರವನ್ನು ತಡೆಹಿಡಿಯುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಶಿವಣ್ಣ ಸೂಡೂರು, ಪ್ರಮುಖರಾದ ಪ್ರಕಾಶ್ ತಮ್ಮಡಿಹಳ್ಳಿ, ಶುಭೋದಯ, ಲಕ್ಷ್ಮೀ, ಮಂಜುನಾಥ್, ಅವಿನಾಶ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News