ಹಿಂದಿ ಹೇರಿಕೆ ವಿರೋಧಿಸಿ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ, ಟ್ವಿಟರ್‌ ಟ್ರೆಂಡಿಂಗ್‌

Update: 2021-09-14 17:54 GMT

ಬೆಂಗಳೂರು: "ಹಿಂದಿ ಹೇರಿಕೆ" ವಿರೋಧಿಸಿ, ಕನ್ನಡ ಸಂಘಟನೆಗಳು ಮಂಗಳವಾರ ಹಿಂದಿ ದಿವಸ್ ಸಂದರ್ಭದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ಬ್ಯಾಂಕುಗಳ ಮುಂದೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ ಟ್ವಿಟರ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆ (KRV) ಮಂಗಳವಾರ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ "#StopHindiImposition" ಹಾಗೂ ''#ಹಿಂದಿಹೇರಿಕೆನಿಲ್ಲಿಸಿ'' ಹ್ಯಾಶ್‌ಟ್ಯಾಗ್‌ನೊಂದಿಗೆ ಆಯೋಜಿಸಿತ್ತು. ರಾಜಕೀಯ ನಾಯಕರು, ಚಿತ್ರ ನಟರು ಸೇರಿದಂತೆ ಸಾವಿರಾರು ಮಂದಿ ಅಭಿಯಾನದಲ್ಲಿ ಪಾಲ್ಗೊಂಡು ಟ್ವೀಟ್ ಮಾಡಿದ್ದಾರೆ. ಆದರೆ ಅದರ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಬ್ಯಾಂಕುಗಳ ಮುಂದೆ ಪ್ರತಿಭಟನೆ ನಡೆಸಿದರು.

ಕೆಆರ್‌ವಿ ತನ್ನ ಕಾರ್ಯಕರ್ತರು ಸೇಡಂ, ಚಿಂಚೋಳಿ, ರೋಣ, ಹುನಗುಂದ, ಹಿರಿಯೂರು, ಪಾಂಡವಪುರ, ಬೆಂಗಳೂರು, ವಿಜಯಪುರ, ಕಲಬುರಗಿ, ಚಿಕ್ಕಬಳ್ಳಾಪುರ, ತೀರ್ಥಹಳ್ಳಿ, ಉಡುಪಿ, ಉತ್ತರ ಕನ್ನಡ, ಕೋಲಾರ, ಮಂಡ್ಯ ಮತ್ತು ಧಾರವಾಡ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಹಿಂದಿ ಹೇರಿಕೆಯನ್ನು ನಿಲ್ಲಿಸುವಂತೆ ಹಾಗೂ ಕನ್ನಡದಲ್ಲಿ ಸೇವೆ ಸಲ್ಲಿಸುವಂತೆ ಅವರು ಬ್ಯಾಂಕ್‌ ಮ್ಯಾನೇಜರ್‌ ಗಳಿಗೆ ಮನವಿಗಳನ್ನು ಸಲ್ಲಿಸಿದರು. "ರಾಷ್ಟ್ರೀಕೃತ ಬ್ಯಾಂಕ್‌ ಗಳ ಮುಂದೆ ಪ್ರತಿಭಟನೆ ನಡೆಸುವುದರ ಉದ್ದೇಶವೇನೆಂದರೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ಮೂಲಕ ಕರ್ನಾಟಕದ ಜನತೆಗೆ ಹಿಂದಿ ಹೇರಿಕೆಯ ಕುರಿತು ತಿಳಿಸುವುದು. ಅವರು ಬ್ಯಾಂಕ್‌ ಗಳಲ್ಲಿರುವ ಕನ್ನಡಿಗರ ಉದ್ಯೋಗಗಳನ್ನು ಕಿತ್ತುಕೊಂಡಿದ್ದಾರೆ" ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ಯ ರಾಜ್ಯ ಸಂಘಟನೆಯ ಕಾರ್ಯದರ್ಶಿ ಅರುಣ್ ಜಾವಗಲ್ ಹೇಳಿಕೆ ನೀಡಿದ್ದಾರೆ.

"ದೇಶಾದ್ಯಂತದ ತೆರಿಗೆದಾರರ ಹಣವನ್ನು ಬಳಸುವುದು ಮತ್ತು ಇನ್ನೂ, ಭಾರತದಂತಹ ಬಹುಭಾಷಾ ದೇಶದಲ್ಲಿ ಹಿಂದಿಗೆ ಮಾತ್ರ ಅನಗತ್ಯ ಪ್ರಾಮುಖ್ಯತೆ ನೀಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಿಂದಿ ದಿವಸ್‌ ಆಚರಣೆಯನ್ನು ಪ್ರಜಾಪ್ರಭುತ್ವ ವಿರೋಧಿ ಅನೈತಿಕ ಎಂದು ಬಣ್ಣಿಸಿದ್ದಾರೆ. "ಎಲ್ಲ ನಾಗರಿಕರೂ ಸಮಾನರು ಎನ್ನುವ ಸಂವಿಧಾನಸ ಆಶಯಕ್ಕೆ ಇದು ವಿರುದ್ಧವಾಗಿದೆ. ಎಲ್ಲಾ ಹಿಂದಿಯೇತರರು ಹಾಗೂ ಸಮಾನತೆಯನ್ನು ನಂಬುವ ಹಿಂದಿ ಭಾಷಿಗರು ಇದನ್ನು ವಿರೋಧಿಸುವಂತೆ ಕರೆ ನೀಡಿದರು.

''ಯಾವುದೇ ಭಾಷೆಯ ಕಲಿಕೆಗೆ ವಿರೋಧ ಇಲ್ಲ. ಭಾಷೆಯನ್ನು ಬಲಾತ್ಕಾರವಾಗಿ ಹೇರುವ ಕುಟಿಲತೆಗೆ ವಿರೋಧ ಇದೆ. ವಿರೋಧಿಸುತ್ತಿರುವುದು ಹಿಂದಿ ಭಾಷೆಯನ್ನಲ್ಲ, ಅದರ ಹೇರಿಕೆಯ ರಾಜಕೀಯವನ್ನು. ಹಿಂದಿ ದಿವಸವನ್ನು ಹಿಂದೆಯೂ ವಿರೋಧಿಸಿದ್ದೇನೆ, ಮುಂದೆಯೂ ವಿರೋಧಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ. 

ಹಿಂದಿ ದಿವಸ್‌ ಆಚರಣೆಯ ವಿರುದ್ಧದ ಧ್ವಿನಗಳಿಗೆ ಧ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಕುಮಾರಸ್ವಾಮಿ ತಮ್ಮ ಟ್ವೀಟ್‌ ನಲ್ಲಿ, "ಕರ್ನಾಟಕದಲ್ಲಿ ಕನ್ನಡ ಮೊದಲು, ಹಿಂದಿ ದಿವಸ್‌ ಆಚರಣೆ ಅನಗತ್ಯ" ಎಂದರು. ಕರ್ನಾಟಕ ಜನಾಧಿಕಾರ ಪಕ್ಷ ಸೇರಿದಂತೆ ಕೆಲ ಸಂಘಟನೆಗಳು ಈ ದಿನವನ್ನು ʼಬ್ಲಾಕ್‌ ಡೇ (ಕರಾಳದಿನ) ಆಗಿ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News