`ಬೆಲೆ ಏರಿಕೆ' ನಿಳುವಳಿ ಸೂಚನೆ: ನಿಯಮ 69ರಡಿ ಚರ್ಚೆಗೆ ನಾಳೆ ಅವಕಾಶ; ಸ್ಪೀಕರ್ ರೂಲಿಂಗ್

Update: 2021-09-14 18:18 GMT

ಬೆಂಗಳೂರು, ಸೆ. 14: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ನೀಡಿದ್ದ ನಿಲುವಳಿ ಸೂಚನೆ ಪ್ರಸ್ತಾವಕ್ಕೆ ನಾಳೆ(ಸೆ.15ರ ಬುಧವಾರ) ಪ್ರಶ್ನೋತ್ತರ ಅವಧಿಯ ಬಳಿಕ ನಿಯಮ 69ರಡಿಯಲ್ಲಿ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಬೆಲೆ ಏರಿಕೆಗೆ ಸಂಬಂಧಿಸಿದ ನಿಲುವಳಿ ಸೂಚನೆ ಪ್ರಸ್ತಾವಕ್ಕೆ ಸ್ಪೀಕರ್ ರೂಲಿಂಗ್ ನೀಡಿದರು. ಆದರೆ, ಕಾಲಮಿತಿಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ರಾಜ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ಚರ್ಚೆ ನಡೆಸಲಿದ್ದೇವೆ. ಇದಕ್ಕೆ ಯಾವುದೇ ಕಾಲ ಮಿತಿ ಹಾಕಬಾರದು. ವಿಪಕ್ಷ ನಾಯಕರಿಗೆ ಮಾತನಾಡಲು ಹೆಚ್ಚು ಸಮಯ ಕೊಡಬೇಕು. ಅದು ಅವರ ಹಕ್ಕು. ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು, ನಿಮ್ಮ ಕಾಲದಲ್ಲಿ ಹೀಗೆಲ್ಲಾ ಆಗಬಾರದು ಬೊಮ್ಮಾಯಿ' ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬೊಮ್ಮಾಯಿ, `ವಿಪಕ್ಷ ನಾಯಕರ ಸಮಯ ಎಷ್ಟು ಬೇಕಾದರೂ ತೆಗೆದುಕೊಳ್ಳಲಿ, ಆದರೆ, ವಿಪಕ್ಷ ನಾಯಕರ ಸಮಯದ ಬಳಿಕ ಸಿದ್ದರಾಮಣ್ಣನ ಟೈಮ್ ಎಂದು ಬೇರೆ ಇರುತ್ತದೆ. ಅದು ಬೇಡ' ಎಂದು ಕಾಲೆಳೆದರು. ಪ್ರತಿಪಕ್ಷ ನಾಯಕನಾಗಿ ರಾಜ್ಯದ ಜನತೆ ಸಮಸ್ಯೆಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಜೆಡಿಎಸ್ ಧರಣಿ: ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಿ ಜೆಡಿಎಸ್ ಮಂಡಿಸಿದ್ದ ನಿಲುವಳಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕಾರ ಮಾಡಿದನ್ನು ಖಂಡಿಸಿ ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ನಿಲುವಳಿ ಮಂಡಿಸಿತ್ತು. ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ, ನಿಲುವಳಿಯನ್ನು ಸ್ಪೀಕರ್ ಕಾಗೇರಿ ತಿರಸ್ಕರಿಸಿದರು.
ನಿಯಮ 60ರ ಬದಲಾಗಿ 69ಕ್ಕೆ ಬದಲಾಯಿಸಲು ಪತ್ರ ನೀಡಬೇಕು ಎಂದು ಸ್ಪೀಕರ್ ಸೂಚನೆ ನೀಡಿದರು. ಆದರೆ, ಇದಕ್ಕೆ ಒಪ್ಪದೆ ಜೆಡಿಎಸ್ ಸದಸ್ಯರು, ಈಗ ನೀಡುವ ಸೂಚನೆಯನ್ನು ಪರಿವರ್ತಿಸಿ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಿ ಎಂದು ಕೋರಿದರು. ಬೇರೆ ರೂಪದಲ್ಲಿ ಪತ್ರ ಕೊಡಿ ಆಲೋಚಿಸುತ್ತೇನೆಂದರು. ಆ ಬಳಿಕ ಸ್ಪೀಕರ್ ಸೂಚನೆಯನ್ನು ಒಪ್ಪಿದ ಜೆಡಿಎಸ್ ಸದಸ್ಯರು ಧರಣಿಯನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News