2011ನೆ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕವಾದವರಿಗೆ ನ್ಯಾಯ: ಜೆ.ಸಿ.ಮಾಧುಸ್ವಾಮಿ

Update: 2021-09-14 18:49 GMT

ಬೆಂಗಳೂರು, ಸೆ.14: 2011ರಲ್ಲಿ ಕೆಪಿಎಸ್ಸಿ ಮೂಲಕ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಗೊಂಡಿದ್ದ 362 ಮಂದಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೆ ಸರಕಾರ ಕಾನೂನು ತಜ್ಞರೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದು, ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ಆಗದೆ ಇರುವುದರಿಂದ ಅರ್ಹ ಅಭ್ಯರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಎಂ.ಪಿ.ಕುಮಾರಸ್ವಾಮಿ ಸರಕಾರದ ಗಮನ ಸೆಳೆದರು. ಇದಕ್ಕೆ ಮಾಧುಸ್ವಾಮಿ ಉತ್ತರಿಸಿದರು.

2011 ರಲ್ಲಿ ನೇಮಕಗೊಂಡಿರುವ 362 ಸಹಾಯಕ ಆಯುಕ್ತರ ಹುದ್ದೆಗಳನ್ನು ನೇಮಕ ಮಾಡುವ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಸರಕಾರ ಮುಕ್ತ ಮನಸ್ಸು ಹೊಂದಿದೆ. ಇವತ್ತು ಬೆಳಗ್ಗೆಯೂ ನಾನು ಎರಡು ಸಭೆಗಳನ್ನು ಮಾಡಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, 2011ರ ಬ್ಯಾಚ್‍ನಲ್ಲಿ ಅಯ್ಕೆಯಾಗಿರುವ ಅಭ್ಯರ್ಥಿಗಳ ಭವಿಷ್ಯದ ಕುರಿತು ಈ ಸದನದಲ್ಲಿ ನಾವು ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ. ಅವರಿಗೆ ನ್ಯಾಯ ಒದಗಿಸಲು ಸರಕಾರಕ್ಕೆ ಇರುವ ಅಡೆತಡೆಗಳಾದರೂ ಏನು? ಸಚಿವರ ಹೇಳಿಕೆಯಲ್ಲಿ ಅಸಹಾಯಕತೆ ಕಂಡು ಬರುತ್ತಿದೆ ಎಂದರು.

ಕೆಪಿಎಸ್ಸಿ ಸದಸ್ಯರ ಮೇಲೆ ಇದ್ದ ಪ್ರಕರಣಗಳನ್ನು ಸರಕಾರ ಹಿಂತೆಗೆದುಕೊಂಡಿತು. ಆದರೆ, ಅಭ್ಯರ್ಥಿಗಳಿಗೆ ಮಾತ್ರ ಅನ್ಯಾಯ ಮಾಡುತ್ತಿದೆ. ಈ ವಿಚಾರದಲ್ಲಿ ಯಾವುದೆ ಸಬೂಬುಗಳನ್ನು ಹೇಳದೆ, ಆತ್ಮವಂಚನೆ ಮಾಡಿಕೊಳ್ಳದೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಸಂವಿಧಾನದ ಕಲಂ 320ಎ ಪ್ರಕಾರ ಸದನದಲ್ಲಿ ಮಂಡನೆ ಮಾಡದೇ ನ್ಯಾಯಾಲಯಕ್ಕೆ ಸದನದಲ್ಲಿ ಮಂಡನೆ ಮಾಡಿದ್ದೇವೆ ಎಂದು ತಪ್ಪು ಮಾಹಿತಿ ನೀಡಿದ್ದರು. ಸರಕಾರ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ನಂತರ ಉತ್ತರಿಸಿದ ಮಾಧುಸ್ವಾಮಿ, ಪ್ರಿವೆನ್ಷನ್ ಆಫ್ ಕರಪ್ಷನ್ ಕಾಯ್ದೆ ಬಗ್ಗೆ ರಾಜ್ಯ ಸರಕಾರ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ರಾಷ್ಟ್ರಪತಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕೆಎಟಿ ರಾಜ್ಯ ಸರಕಾರದ ವಿರುದ್ಧ ಆದೇಶ ನೀಡಿತು. ಅದನ್ನು ಜಾರಿಗೆ ಸರಕಾರ ಮುಂದಾದಾಗ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು ಎಂದರು.

ಹೈಕೋರ್ಟ್ ಆದೇಶದ ಮೇಲೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಆದೇಶ ನೀಡಿರುವುದಿಲ್ಲ ಎಂದು ತಿಳಿಸಿದೆ. ಈಗ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಬೇಕಾ ಅಥವಾ ಸದನದಲ್ಲಿ ಈ ಬಗ್ಗೆ ತೀರ್ಮಾನ ಮಾಡಬೇಕಾ ಎನ್ನುವ ಬಗ್ಗೆ ಚರ್ಚಿಸಲಾಗುತ್ತಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಲ್ಪ ಸಮಯ ನೀಡಬೇಕು. ಇನ್ನೂ 15-20 ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News