×
Ad

ಹಕ್ಕುಚ್ಯುತಿ ಪ್ರಸ್ತಾವನೆ ಮಂಡನೆಗೆ ಅವಕಾಶ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸಾ.ರಾ. ಮಹೇಶ್

Update: 2021-09-15 17:17 IST

ಬೆಂಗಳೂರು, ಸೆ. 15: `ಹಕ್ಕುಚ್ಯುತಿ ಪ್ರಸ್ತಾವನೆ' ಮಂಡನೆಗೆ ಅವಕಾಶ ನೀಡದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಜೆಡಿಎಸ್ ಸದಸ್ಯ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವನೆಗೆ ನೋಟಿಸ್ ನೀಡಿದ್ದ ಸಾ.ರಾ.ಮಹೇಶ್ ಅವಕಾಶಕ್ಕಾಗಿ ಸ್ಪೀಕರ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, `ನಿಮ್ಮ ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಗಮನಿಸಿದ್ದೇನೆ. ಚರ್ಚೆಗೆ ಅವಕಾಶ ಕೊಡುತ್ತೇನೆ. ಇಂದು ಕಷ್ಟ, ನಾಳೆ ಅಥವಾ ನಾಡಿದ್ದು ಸಮಯಾವಕಾಶ ನೀಡುವೆ' ಎಂದರು.

ಇಂದೇ ವಿಷಯ ಪ್ರಸ್ತಾವನೆಗೆ ಅವಕಾಶ ನೀಡಿ ಎಂದು ಶಾಸಕ ಮಹೇಶ್ ಪಟ್ಟು ಹಿಡಿದರು. ಇವರಿಗೆ ಧ್ವನಿಗೂಡಿಸಿದ ಜೆಡಿಎಸ್‍ನ ಹಿರಿಯ ಸದಸ್ಯರಾದ ಎಚ್.ಡಿ. ರೇವಣ್ಣ, ಡಾ.ಅನ್ನದಾನಿ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೃಷ್ಣಾರೆಡ್ಡಿ ಸೇರಿದಂತೆ ಮತ್ತಿತರರು ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

`ಇದು ನನ್ನ ಹಕ್ಕುಚ್ಯುತಿಯ ಪ್ರಶ್ನೆ. ನನಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ' ಎಂದು ಸಾ.ರಾ. ಮಹೇಶ್ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಇದಕ್ಕೆ ಜೆಡಿಎಸ್‍ನ ಕೆಲ ಸದಸ್ಯರು ಬೆಂಬಲ ನೀಡಿದರು.

`ಹಕ್ಕುಚ್ಯುತಿ ಪ್ರಸ್ತಾವನೆಯ ಚರ್ಚೆಗೆ ನಾನು ಅವಕಾಶ ನೀಡುವುದಿಲ್ಲವೆಂದು ಹೇಳಿಲ್ಲ. ನಾಳೆ ಅಥವಾ ನಾಡಿದ್ದು ಕೊಡುತ್ತೇನೆಂದು ಹೇಳಿದ್ದೇನೆ. ನೀವು ಇಂತಹದ್ದೆ ಸಮಯಕ್ಕೆ ಕೊಡಬೇಕೆಂದು ಸ್ಪೀಕರ್‍ಗೆ ಹೇಳುವುದು ಸರಿಯಲ್ಲ ಎಂದು ಸ್ಪೀಕರ್ ಕಾಗೇರಿ ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ಕೊಡಬೇಕೆಂದು ಸ್ಪೀಕರ್‍ಗೆ ಮನವಿ ಮಾಡಿದರು. ಬಳಿಕ ಕೂಡಲೇ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಭರವಸೆ ನೀಡಿದ್ದರಿಂದ ಸಾ.ರಾ.ಮಹೇಶ್ ಸೇರಿದಂತೆ ಜೆಡಿಎಸ್ ಸದಸ್ಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News