`ಪಾರ್ಶ್ವ ವಾಯು ಪೀಡಿತ ವ್ಯಕ್ತಿಗೆ ವೆಂಟಿಲೇಟರ್ ಹಾಸಿಗೆ ಕೊಡಿಸಲು ಆಗ್ತಿಲ್ಲ': ಭಾವುಕರಾದ ಬಿಜೆಪಿ ಶಾಸಕ ಎಚ್.ಹಾಲಪ್ಪ

Update: 2021-09-15 15:46 GMT

ಬೆಂಗಳೂರು, ಸೆ. 15: ಪಾರ್ಶ್ವವಾಯು ಪೀಡಿತ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇರುವ ಹಾಸಿಗೆ ಕೊಡಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾದರೆ ಸರಕಾರಕ್ಕೆ ಇನ್ನೂ ವೆಂಟಿಲೇಟರ್ ಸಮಸ್ಯೆ ಇದೆಯೇ? ಎಂದು ಆಡಳಿತ ಪಕ್ಷದ ಶಾಸಕ ಎಚ್.ಹಾಲಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಾಲಪ್ಪ, ಬೆಳಗ್ಗೆ ನನ್ನ ಕ್ಷೇತ್ರ ಸಾಗರದಿಂದ ಪಾರ್ಶ್ವ ವಾಯು ಪೀಡಿತ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ಆದರೆ, ಆರೋಗ್ಯ ಇಲಾಖೆ ಆಯುಕ್ತರು, ನಿಮ್ಹಾನ್ಸ್‍ನ ನಿರ್ದೇಶಕರು ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಿದರೂ ವೆಂಟಿಲೇಟರ್ ಇರುವ ಹಾಸಿಗೆ ಕೊಡಿಸಲು ಸಾಧ್ಯವಾಗಿಲ್ಲ. ಇನ್ನು ಕೆಲವೇ ಗಂಟೆಗಳಲ್ಲಿ ಆತ ಸತ್ತೇ ಹೋಗುತ್ತಾನೆ ಎಂದು ಗಮನ ಸೆಳೆದರು.

ಸರಕಾರದ ಪರವಾಗಿ ಉತ್ತರಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ನಿಮ್ಹಾನ್ಸ್ ಆಸ್ಪತ್ರೆ ಬಹಳ ಪ್ರತಿಷ್ಠಿತ ಸಂಸ್ಥೆ. ರಾಜ್ಯ ಸರಕಾರವೂ ವಾರ್ಷಿಕ 70 ರಿಂದ 80 ಕೋಟಿ ರೂ.ಅನುದಾನ ನೀಡುತ್ತದೆ. ನಿಮ್ಹಾನ್ಸ್‍ಗೆ ಇಡೀ ದಕ್ಷಿಣ ಭಾರತದಿಂದ ರೋಗಿಗಳು ಬರುತ್ತಾರೆ. ಹೀಗಾಗಿ ಹೆಚ್ಚಿನ ಒತ್ತಡವಿದೆ.

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಯಾವಾಗಲೂ ಭರ್ತಿಯಾಗಿರುತ್ತದೆ. ಪಾರ್ಶ್ವ ವಾಯು ಪೀಡಿತ ರೋಗಿಯ ಬಗ್ಗೆ ನನಗೆ ಮಾಹಿತಿ ಬಂದ ಕೂಡಲೇ ನಿರ್ದೇಶಕರಿಗೆ ಕರೆ ಮಾಡಿ ಪ್ರಯತ್ನ ಮಾಡಿದೆವು. ಅಲ್ಲಿದ್ದ ಎಲ್ಲ ರೋಗಿಗಳು ವೆಂಟಿಲೇಟರ್‍ನಲ್ಲಿದ್ದ ಕಾರಣ ಈ ರೋಗಿಯನ್ನು ಸೆಂಟ್ ಜಾನ್ಸ್‍ಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಚಿವರು ನೀಡಿದ ಉತ್ತರ ಸರಿಯಾಗಿಲ್ಲ. ನನಗೆ ಈಗಷ್ಟೇ ರೋಗಿಗಳ ಸಂಬಂಧಿಕರು ಕರೆ ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದ ಹಾಲಪ್ಪ, ವೆಂಟಿಲೇಟರ್ ಸಮಸ್ಯೆಯಿಂದಲೇ ನಾನು ನನ್ನ ಹೆಂಡತಿಯ ಅಕ್ಕ ಸೇರಿದಂತೆ ಇಬ್ಬರನ್ನು ಕಳೆದುಕೊಂಡಿದ್ದೇನೆ. ಇದೀಗ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಾಯುತ್ತಿದ್ದಾನೆ' ಎಂದು ಭಾವುಕರಾದರು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅತಿಹೆಚ್ಚು ವೆಂಟಿಲೇಟರ್ ವ್ಯವಸ್ಥೆ ಇರುವುದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ. ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಪಾಶ್ರ್ಯವಾಯು ಪೀಡಿತ ರೋಗಿಗೆ ಅಗತ್ಯ ವವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News