ರಾಜ್ಯದ ಪ್ರತಿ ಗ್ರಾಮದಲ್ಲೂ ಸ್ಮಶಾನ ಭೂಮಿ ಕಲ್ಪಿಸಲು ಡಿಸಿಗಳಿಗೆ ಸೂಚನೆ: ಸಚಿವ ಆರ್.ಅಶೋಕ್

Update: 2021-09-15 13:34 GMT

ಬೆಂಗಳೂರು, ಸೆ.15: ರಾಜ್ಯದ ಪ್ರತಿ ಗ್ರಾಮದಲ್ಲಿಯೂ ಸಾರ್ವಜನಿಕ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸುವ ಸಂಬಂಧ ರಾಜ್ಯದ ಎಲ್ಲ ಡಿಸಿಗಳಿಗೆ ವಿಶೇಷ ಸಭೆ ಕರೆದು ತೀರ್ಮಾನ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಗರಿಷ್ಠ 2 ಎಕರೆ ಸರಕಾರಿ ಭೂಮಿಯನ್ನು ಒದಗಿಸಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಸರಕಾರಿ ಭೂಮಿ ಇಲ್ಲದ ಗ್ರಾಮದಲ್ಲಿ ಖಾಸಗಿ ಜಮೀನು ಖರೀದಿಸಲು ಈಗಾಗಲೇ 26 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. 

ಬೆಳಗಾವಿ ಜಿಲ್ಲೆಯ 816 ಗ್ರಾಮಗಳು ಸ್ಮಶಾನ ಭೂಮಿ ಸೌಲಭ್ಯವನ್ನು ಹೊಂದಿವೆ. 372 ಗ್ರಾಮಗಳು ಇನ್ನೂ ಸ್ಮಶಾನಗಳ ಸೌಲಭ್ಯವನ್ನು ಹೊಂದಿಲ್ಲ. ಸ್ಮಶಾನ ಸೌಲಭ್ಯ ಕಲ್ಪಿಸುವುದಕ್ಕಾಗಿ ಭೂ ಮಾಲಕರಿಂದ ನೇರವಾಗಿ ಭೂಮಿ ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದು ಹೇಳಿದರು. 

ಇದಕ್ಕೂ ಮುನ್ನ ಮಾತನಾಡಿದ ಮಹಾಂತೇಶ ಕವಟಗಿಮಠ ಅವರು, ಬೆಳಗಾವಿ ಜಿಲ್ಲೆಯ 372 ಗ್ರಾಮಗಳಲ್ಲಿ ಸ್ಮಶಾನವಿಲ್ಲದೇ ಮೃತಪಟ್ಟವರ ಶವಸಂಸ್ಕಾರ ಮಾಡಲು ಬಹಳಷ್ಟು ತೊಂದರೆ ಆಗಿದೆ. ಹೀಗಾಗಿ, ಸ್ಮಶಾನ ಸೌಲಭ್ಯ ಕಲ್ಪಿಸಲು ಹೆಚ್ಚಿನ ಹಣ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News