ಕಂದಾಯ ಗ್ರಾಮಗಳಾಗಿ 1,400 ತಾಂಡಗಳ ಪರಿವರ್ತನೆ: ಸಚಿವ ಆರ್.ಅಶೋಕ್

Update: 2021-09-15 13:40 GMT

ಬೆಂಗಳೂರು, ಸೆ.15: ರಾಜ್ಯದಲ್ಲಿರುವ ಲಂಬಾಣಿ ತಾಂಡಗಳ ಪೈಕಿ 1,400 ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಳಿತಕ್ಕೊಳಗಾದ ಸಮಾಜಕ್ಕೆ ನಾಗರಿಕ ಸೌಲಭ್ಯ ಕಲ್ಪಿಸುವುದು ಸರಕಾರದ ಆದ್ಯತೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿ ಲಂಬಾಣಿ ತಾಂಡಗಳು ಮತ್ತು ಭೋವಿ ಸಮುದಾಯದ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

ಲಂಬಾಣಿ ತಾಂಡಗಳು ಮತ್ತು ಭೋವಿ ಸಮುದಾಯದ ಹಟ್ಟಿಗಳು ಅರಣ್ಯ ಭೂಮಿಯಲ್ಲಿರಲಿ ಅಥವಾ ಸರಕಾರಿ ಭೂಮಿಯಲ್ಲಿರಲಿ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಅವರಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಪ್ರಕಾಶ್ ರಾಥೋಡ್, ರಾಜ್ಯದಲ್ಲಿ 5 ಸಾವಿರಕ್ಕೂ ಅಧಿಕ ಲಂಬಾಣಿ ತಾಂಡಗಳಿವೆ. ಇಂದಿಗೂ ಈ ತಾಂಡಗಳು ಮೂಲ ಸೌಲಭ್ಯ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ಆದಷ್ಟು ಶೀಘ್ರ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು.             

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News