ಕೋವಿಡ್-19 ಸೋಂಕು: ಅನಾಥ ಮಕ್ಕಳ ಸರ್ವೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸ್ಸು

Update: 2021-09-15 15:11 GMT

ಬೆಂಗಳೂರು, ಸೆ. 15: ವಿಕಲಚೇತರಿಗೆ ನೀಡುತ್ತಿರುವ ಮಾಸಾಶನ(ಶೇ.45ರಿಂದ 70ರಷ್ಟು ಅಂಗವಿಕಲತೆ)ವನ್ನು 800 ರೂ.ನಿಂದ 3ಸಾವಿರ ರೂ.ಗಳಿಗೆ, ಶೇ.70ಕ್ಕೂ ಹೆಚ್ಚು ಅಂಗವಿಕಲತೆಯುಳ್ಳವರಿಗೆ 6ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ವಿಧಾನ ಮಂಡಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ.

ಬುಧವಾರ ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಕೆ.ಪೂರ್ಣಿಯಾ ಅವರು ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಿದರು. ಭಿಕ್ಷುಕರ ಪುನರ್‍ವಸತಿ ಕಾರ್ಯಕ್ಕೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಇಲಾಖೆ, ಸಮಾಜ ಕಲ್ಯಾಣ ಹಾಗೂ ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದೆ.

ಭಿಕ್ಷಾಟನೆ ಜಾಲ ನಿಯಂತ್ರಣಕ್ಕೆ ಗೃಹ ಇಲಾಖೆ ಸಫಲವಾಗಿಲ್ಲ. ಆದುದರಿಂದ ಭಿಕ್ಷಾಟನೆಗೆ ಪ್ರೋತ್ಸಾಹಿಸುವ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭಿಕ್ಷಾಟನೆ ಮಾಡುವವರ ಮನವೊಲಿಕೆ ಮೂಲಕ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಅನುವು ಮಾಡಿಕೊಡಬೇಕು ಎಂದು ಶಿಫಾರಸ್ಸು ಮಾಡಿದೆ.

ಅನಾಥ ಮಕ್ಕಳ ಸರ್ವೆಗೆ ಶಿಫಾರಸ್ಸು: ಕೋವಿಡ್ ಹಿನ್ನೆಲೆಯಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳನ್ನು ಅನಾಥರೆಂದು ಪರಿಗಣಿಸುವ ಕುರಿತು ಸರಕಾರ ಮಾರ್ಗಸೂಚಿ ಹೊರಡಿಸಬೇಕು. ಅಂತಹ ಮಕ್ಕಳ ಸರ್ವೆ ಮಾಡಬೇಕು. ಅಲ್ಲದೆ, ಆ ಮಕ್ಕಳಲ್ಲಿ ಕೋವಿಡ್ ಸೋಂಕು ಬರದಂತೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಅಂಗನವಾಡಿಗಳಲ್ಲಿ ನೀಡುತ್ತಿರುವ ಪೌಷ್ಟಿಕಾಂಶಯುಕ್ತ ಆಹಾರದ ಜೊತೆಗೆ ಮೊಟ್ಟೆ, ಕಡಲೆಬೀಜದ ಚಿಕ್ಕಿ, ತರಕಾರಿ ಜೊತೆಗೆ ಹೈಪ್ರೋಟೀನ್ ಇರುವ ಸತ್ವಭರಿತ ಆಹಾರ ನೀಡಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಆಹಾರದ ಚಾರ್ಟ್ ಅನ್ವಯ ಹಾಲಿನ ಪುಡಿ, ಬೇಳೆ, ಬೆಲ್ಲ ಇವುಗಳನ್ನು ಅಂಗನವಾಡಿಗೆ ನೀಡುವ ಬದಲು ನೇರವಾಗಿ ಮನೆಗಳಿಗೆ ನೀಡಬೇಕು. ಅಲ್ಲದೆ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಪೈಪ್‍ಲೈನ್ ವ್ಯವಸ್ಥೆ ಕಲ್ಪಿಸಬೇಕೆಂದು ಸೇರಿದಂತೆ ಸಮಿತಿ ಒಟ್ಟು 32 ಶಿಫಾರಸ್ಸುಗಳನ್ನು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News