ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ: ಪರಿಷತ್‍ನಲ್ಲಿ ಸಮಗ್ರ ತನಿಖೆಗೆ ಕಾಂಗ್ರೆಸ್ ಸದಸ್ಯರ ಆಗ್ರಹ
ಬೆಂಗಳೂರು, ಸೆ.15: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯನ್ನು ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕ್ರಮ ವಿರೋಧಿಸಿ ವಿಧಾನಸೌಧ ಮುತ್ತಿಗೆ ಚಳವಳಿ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದ ಘಟನೆ ವಿಧಾನ ಪರಿಷತ್‍ನಲ್ಲಿ ಬುಧವಾರ ಪ್ರತಿಧ್ವನಿಸಿತು. ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಅವರು ಈ ಘಟನೆ ಕುರಿತಂತೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಅವರು, ಎನ್‍ಇಪಿ ವಿರೋಧಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇದು ಖಂಡನೀಯ. ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್‍ನ ಸದಸ್ಯರೂ ಅದಕ್ಕೆ ಧ್ವನಿಗೂಡಿಸಿದರು. ಆದರೆ, ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಶೂನ್ಯವೇಳೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಸಬಾರದು ಎಂದು ಒತ್ತಾಯಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.