ತಿಯಾನ್ಮೆನ್ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಂಕಾಂಗ್ ಕಾರ್ಯಕರ್ತರಿಗೆ ಜೈಲುಶಿಕ್ಷೆ

Update: 2021-09-15 17:08 GMT

ಹಾಂಕಾಂಗ್, ಸೆ.15: ಪೊಲೀಸರ ನಿಷೇಧವಿದ್ದರೂ ಕಳೆದ ವರ್ಷ ನಡೆದ ತಿಯಾನ್ಮೆನ್ ಅನುಸರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಂಕಾಂಗ್ ನ 9 ಹಿರಿಯ ಪ್ರಜಾತಂತ್ರ ಕಾರ್ಯಕರ್ತರಿಗೆ 6ರಿಂದ 10 ತಿಂಗಳಾವಧಿಯ ಜೈಲು ಶಿಕ್ಷೆ ವಿಧಿಸಲಗಿದೆ ಎಂದು ವರದಿಯಾಗಿದೆ. ಇದೇ ಅಪರಾಧ ಸಾಬೀತಾಗಿರುವ 3 ಇತರ ಕಾರ್ಯಕರ್ತರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 1989ರಲ್ಲಿ ಚೀನಾದ ತಿಯೆನ್ಮಾನ್ ವೃತ್ತದಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಯನ್ನು ಚೀನಾ ಸರಕಾರ ಬಲಪ್ರಯೋಗಿಸಿ ಹತ್ತಿಕ್ಕಿದ್ದು ಹಲವು ಮಂದಿ ಮೃತಪಟ್ಟಿದ್ದರು. ಇದರ 30ನೇ ವರ್ಷಾಚರಣೆಯನ್ನು ಕಳೆದ ವರ್ಷದ ಜೂನ್ 4ರಂದು ಹಾಂಕಾಂಗ್ನಲ್ಲಿ ಆಯೋಜಿಸಲಾಗಿತ್ತು.

 ಈ ತೀರ್ಪು ಹಾಂಕಾಂಗ್ ಜನತೆಯ ಹಕ್ಕು ಮತ್ತು ಸ್ವಾತಂತ್ರ್ಯದ ಮೇಲಿನ ಮತ್ತೊಂದು ಆಘಾತಕಾರಿ ಪ್ರಹಾರವಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡಿಸಿದೆ. ಅಂತರ್ ರಾಷ್ಟ್ರೀಯವಾಗಿ ಪರಿಗಣಿಸಲ್ಪಟ್ಟ ಅಪರಾಧ ನಡೆಸದಿದ್ದರೂ 12 ಮಂದಿಗೆ ಶಿಕ್ಷೆ ವಿಧಿಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ತಿಯಾನ್ಮೆನ್ ಅನುಸರಣೆ ಕಾರ್ಯಕ್ರಮದ ಆಯೋಜಕರಿಗೆ ಇನ್ನಷ್ಟು ತೀವ್ರ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ಏಶ್ಯಾ-ಪೆಸಿಫಿಕ್ ನಿರ್ದೇಶಕಿ ಯಾಮಿನಿ ಮಿಶ್ರಾ ಹೇಳಿದ್ದಾರೆ.

 2019ರಲ್ಲಿ ಹಾಂಕಾಂಗ್ನಲ್ಲಿ ಪ್ರಜಾಪ್ರಭುತ್ವಕ್ಕೆ ಆಗ್ರಹಿಸುವ ಬ್ರಹತ್ ಪ್ರತಿಭಟನೆ ನಡೆದ ಬಳಿಕ ಚೀನಾವು ಹಾಂಕಾಂಗ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ವಿಧ್ವಂಸಕ ಕೃತ್ಯ, ಪ್ರತ್ಯೇಕತಾವಾದಕ್ಕೆ ಪ್ರೋತ್ಸಾಹ , ಭಯೋತ್ಪಾದನೆ , ವಿದೇಶೀ ಶಕ್ತಿಗಳೊಂದಿಗೆ ಶಾಮೀಲಾಗಿರುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಚೀನಾವು ಭಾವಿಸುವ ವ್ಯಕ್ತಿಗಳನ್ನು ಅಪರಾಧಿಗಳೆಂದು ಘೋಷಿಸಬಹುದಾಗಿದೆ. 
ಹಾಂಕಾಂಗ್ ಪ್ರಾಂತ್ಯವು ರಾಷ್ಟ್ರೀಯ ಭದ್ರತೆಗೆ ತೊಡಕಾಗುವ ಅಪರಾಧದ ಕೇಂದ್ರಸ್ಥಾನವಾಗಿ ರೂಪುಗೊಳ್ಳುತ್ತಿದೆ ಎಂದು ಈ ವರ್ಷ ಭದ್ರತಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕ್ರಿಸ್ ಟ್ಯಾಂಗ್ ಹೇಳಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News