`ನಮ್ಮನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ': ಜೆಡಿಎಸ್ ಶಾಸಕರ ಅಸಮಾಧಾನ

Update: 2021-09-15 17:36 GMT

ಬೆಂಗಳೂರು, ಸೆ. 15: `ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸೂಕ್ತ ರೀತಿಯಲ್ಲಿ ಅನುದಾನ ನೀಡದೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹೆಸರಿಗೆ ಕಳಂಕ ತರುವ ಕೆಲಸ ಸರಿಯಲ್ಲ' ಎಂದು ಜೆಡಿಎಸ್ ಸದಸ್ಯರು ಆಕ್ಷೇಪಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕೃಷ್ಣಾರೆಡ್ಡಿ ಕೇಳಿದ ಪ್ರಶ್ನೆಗೆ ಸರಕಾರ ನೀಡಿದ ಉತ್ತರದಿಂದ ತೃಪ್ತರಾಗದ ಡಾ.ಅನ್ನದಾನಿ, ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು, ಪ್ರತಿಯೊಂದು ಜಾತಿಗೂ ಒಂದೊಂದು ನಿಗಮ ಸ್ಥಾಪಿಸಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನೇ ನೀಡುತ್ತಿಲ್ಲ ಎಂದರು.

`ಸಣ್ಣ-ಸಣ್ಣ ಸಮಾಜದ ಜನರು ಶಾಸಕರ ಬಳಿಗೆ ಅರ್ಜಿ ಹಿಡಿದುಕೊಂಡು ಬಂದರೆ ನಾವು ಅವರಿಗೆ ನಾಲ್ಕೈದು ವರ್ಷ ಕಳೆದರೂ ಒಂದೇ ಒಂದು ಸೌಲಭ್ಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಫಲಾನುಭವಿಗಳ ಆಯ್ಕೆಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಏಕೆ ಮಾಡಿದ್ದೀರಿ? ಕೂಡಲೇ ನಮ್ಮ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ' ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

`ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಮಹೋನ್ನತ ಉದ್ದೇಶಕ್ಕಾಗಿ ನಿಗಮ ಸ್ಥಾಪಿಸಿ ಬಡ, ಮಧ್ಯಮ ವರ್ಗಕ್ಕೆ ಸರಕಾರದ ಸೌಲಭ್ಯ ಕೊಡಿಸಲು ಮುಂದಾಗಿದ್ದರು. ಆದರೆ, ಸರಕಾರ ಎಲ್ಲ ಜಾತಿಗೂ ನಿಮಗ ಸ್ಥಾಪಿಸಿ ಜಾತಿಗಳನ್ನು ಛಿದ್ರ, ಛಿದ್ರ ಮಾಡಲಾಗಿದೆ. ನಿಗಮಕ್ಕೆ ಸಮರ್ಪಕವಾಗಿ ಅನುದಾನ ಒದಗಿಸಬೇಕು' ಎಂದು ಅವರು ಆಗ್ರಹಿಸಿದರು.

ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, `ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿಗಮಕ್ಕೆ ಸಮರ್ಪಕ ಅನುದಾನ ಕೊಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ನಿಗಮದಿಂದ 2019-20 ಮತ್ತು 2020-21ನೆ ಸಾಲಿನಲ್ಲಿ ಒಟ್ಟು 35,421 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಒಟ್ಟು 341 ಕೋಟಿ ರೂ.ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗಿದೆ. 21ನೆ ಸಾಲಿನಲ್ಲಿ ನಿಗಮಕ್ಕೆ ಆಯವ್ಯಯದಲ್ಲಿ 60 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಅರಿವು ಶೈಕ್ಷಣಿಕ ಸಾಲ ಮತ್ತು ವೈಯಕ್ತಿಕ ಸಾಲ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪೂಜಾರಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News