ಬ್ರಿಟನ್ ಸಂಸತ್ತು ಪ್ರವೇಶಕ್ಕೆ ಚೀನಾದ ರಾಯಭಾರಿಗೆ ನಿಷೇಧ

Update: 2021-09-15 17:52 GMT

ಲಂಡನ್, ಸೆ.15: ಪಶ್ಚಿಮ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಗರ್ ಅಲ್ಪಸಂಖ್ಯಾತ ಸಮುದಾಯದ ಮಾನವಹಕ್ಕು ಉಲ್ಲಂಘನೆಯಾಗುತ್ತಿರುವ ಬಗ್ಗೆ ಪ್ರಸ್ತಾವಿಸಿದ ಬ್ರಿಟನ್ನ ಕೆಲವು ಸಂಸದರ ವಿರುದ್ಧ ಚೀನಾ ನಿರ್ಬಂಧ ವಿಧಿಸಿರುವುದಕ್ಕೆ ಪ್ರತಿಯಾಗಿ, ಚೀನಾದ ರಾಯಭಾರಿ ಬ್ರಿಟನ್ ಸಂಸತ್ತು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಬ್ರಿಟನ್ ಹೇಳಿದೆ.

ಮಂಗಳವಾರದಿಂದ ಅನ್ವಯವಾಗಿ ಈ ನಿಷೇಧ ಜಾರಿಗೆ ಬಂದಿದೆ. ಚೀನಾವು ಬ್ರಿಟನ್ ಸಂಸತ್ತಿನ ಕೆಲವು ಸದಸ್ಯರ ಮೇಲೆ ನಿರ್ಬಂಧ ವಿಧಿಸಿರುವಾಗ, ಆ ದೇಶದ ರಾಯಭಾರಿ ಬ್ರಿಟನ್ ಸಂಸತ್ತಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ಬ್ರಿಟನ್ ಸಂಸತ್ತಿನ ಸ್ಪೀಕರ್ ಲಿಂಡ್ಸೆ ಹಾಯ್ಲೆ ಮತ್ತು ಹೌಸ್ ಆಫ್ ಲಾರ್ಡ್ಸ್(ರಾಜ್ಯಸಭೆ)ನ ಸ್ಪೀಕರ್ ಜಾನ್ ಮೆಕ್ಫಾಲ್ ಹೇಳಿದ್ದಾರೆ.

ದೇಶಗಳ ನಡುವೆ, ಸಂಸದರ ಮಧ್ಯೆ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ವಿಶ್ವದಾದ್ಯಂತದ ರಾಯಭಾರಿಗಳೊಂದಿಗೆ ಸಂಸತ್ತಿನಲ್ಲಿ ನಿರಂತರ ಸಭೆ ನಡೆಸುತ್ತಿದ್ದೇವೆ. ಆದರೆ ಚೀನಾವು ನಮ್ಮ ಸಂಸದರ ಮೇಲೆ ನಿರ್ಬಂಧ ವಿಧಿಸಿರುವಾಗ ನಮ್ಮ ಸಂಸತ್ತಿನಲ್ಲಿ ಅವರ ರಾಯಭಾರಿ ಮಾತನಾಡುವುದು ಸರಿಯಲ್ಲ ಎಂದು ಹಾಯ್ಲಿ ಹೇಳಿದ್ದಾರೆ.

ಇದೊಂದು ಅನಪೇಕ್ಷಿತ ಹಸ್ತಕ್ಷೇಪ ಪ್ರಕ್ರಿಯೆ ಎಂದು ಚೀನಾ ಆಕ್ರೋಶಭರಿತ ಪ್ರತಿಕ್ರಿಯೆ ನೀಡಿದೆ ಎಂದು ಲಂಡನ್ನ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಬ್ರಿಟನ್ ಸಂಸತ್ತಿನ ಕೆಲವು ವ್ಯಕ್ತಿಗಳು ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ನಡೆಸುವ ಹೇಯ ಮತ್ತು ಹೇಡಿತನದ ಉಪಕ್ರಮಗಳು, ಉಭಯ ದೇಶಗಳ ಆಸಕ್ತಿಗೆ ವಿರುದ್ಧವಾಗಿವೆ ಮತ್ತು ಉಭಯ ದೇಶಗಳ ನಡುವಿನ ಸಾಮಾನ್ಯ ಪ್ರಕ್ರಿಯೆ ಮತ್ತು ಸಹಕಾರ ಸಂಬಂಧಕ್ಕೆ ತೊಡಕಾಗಿದೆ ಎಂದು ಚೀನಾದ ರಾಯಭಾರಿ ಕಚೇರಿಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದಲ್ಲಿ ಉಯಿಗರ್ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ವಿಷಯದಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಚೀನಾವು ಕಳೆದ ಮಾರ್ಚ್ನಲ್ಲಿ ಬ್ರಿಟನ್ನ 9 ರಾಜಕಾರಣಿಗಳು, ವಕೀಲರು ಹಾಗೂ ಅಕಾಡೆಮಿಗೆ ನಿರ್ಬಂಧ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News