ಪುತ್ತೂರು ತಾಲೂಕಿನ ರಸ್ತೆ ದುರಸ್ತಿಗೆ ಹಣ: ಸಚಿವ ಈಶ್ವರಪ್ಪ

Update: 2021-09-15 18:06 GMT

ಬೆಂಗಳೂರು, ಸೆ. 15: ಅತಿವೃಷ್ಟಿ ಹಾಗೂ ಹೆಚ್ಚಿನ ಮಳೆಯಿಂದ ರಾಜ್ಯದಲ್ಲಿ ರಸ್ತೆಗಳು ಹಾಳಾಗಿದ್ದು, ಕಳೆದ ವರ್ಷ ರಸ್ತೆ ದುರಸ್ತಿ ನಿರ್ಮಾಣಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ಆರ್ಥಿಕ ಇಲಾಖೆಯಿಂದ ಅನುದಾನ ಬಂದ ಕೂಡಲೇ ಪುತ್ತೂರು ತಾಲೂಕಿನ ರಸ್ತೆಗಳ ದುರಸ್ತಿಗೆ ಹಣ ನೀಡಲಾಗುವುದು ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸಂಜೀವ್ ಮಠಂದೂರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ವರ್ಷವೂ ಆರ್ಥಿಕ ಇಲಾಖೆಯಿಂದ ಇನ್ನೂ ಹಣ ಬಂದಿಲ್ಲ. ಹಣ ಬಂದ ಕೂಡಲೇ ಶಾಸಕರ ಕ್ಷೇತ್ರಗಳ ಬೇಡಿಕೆಗೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಅನುದಾನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದರು.

ಅಲ್ಲದೆ, ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ಒಟ್ಟು 26 ಹುದ್ದೆಗಳು ಮಂಜೂರಾಗಿದ್ದು ಆ ಪೈಕಿ 5 ಹುದ್ದೆಗಳು ಭರ್ತಿಯಾಗಿವೆ. ಖಾಲಿ ಇರುವ 21 ಹುದ್ದೆಗಳಿಗೆ ನಿಯೋಜನೆ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಉಳಿದ ಸಿಬ್ಬಂದಿ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಪಡೆದು ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಾಸಕ ಸಂಜೀವ್ ಮಠಂದೂರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುತ್ತದೆ. ಅಲ್ಲದೆ, ಅತಿವೃಷ್ಟಿಯಿಂದ ರಸ್ತೆಗಳು ಸಂಪೂರ್ಣ ಹೆದಗೆಟ್ಟಿದ್ದು, ಅನುದಾನವನ್ನು ಮಳೆಗಾಲದಲ್ಲಿ ಬಿಡುಗಡೆ ಮಾಡಿದರೆ ರಸ್ತೆ ದುರಸ್ತಿ ಕಾರ್ಯ ಸಾಧ್ಯವಾಗುವುದಿಲ್ಲ. ಹೀಗಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News