ಶಿವಮೊಗ್ಗ: ರೈತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರ್ ಬೃಹತ್ ಧರಣಿ

Update: 2021-09-16 06:05 GMT

ಶಿವಮೊಗ್ಗ, ಸೆ.16:  ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು, ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಬೃಹತ್ ಧರಣಿ ನಡೆಸಿದರು.

ಕಳೆದ 30-40 ವರ್ಷಗಳಿಂದ ಅರಣ್ಯಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಭೂ ಮಂಜೂರಾತಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಸಕ್ರಮ ಮಾಡದೇ ರೈತ ವಿರೋಧಿ ನಿಲುವು ತಾಳುತ್ತಿದ್ದಾರೆ ಎಂದು ಧರಣಿನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ 13 ವರ್ಷ ಕಳೆದರೂ ರೈತರಿಗೆ ಹಕ್ಕುಪತ್ರ ಲಭಿಸಿಲ್ಲ. ಅಂದು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಾಯ ಮಾಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಈಗ ಮೌನವಾಗಿದ್ದಾರೆ. ಕಳೆದ 7 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಸಂಸದ ರಾಘವೇಂದ್ರ ಸಂಸತ್ತಿನಲ್ಲಿ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಆಗ್ರಹಿಸಬೇಕು ಎಂದು ರೈತರು ಒತ್ತಾಯಿಸಿದರು.

ಸೊರಬ ತಾಲೂಕಿನ ಸಿಡ್ಲಿಹಳ್ಳಿ ಗ್ರಾಮದಲ್ಲಿ 121 ಜನ ರೈತರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಕೆಲವರು ಅರಣ್ಯ‌ಇಲಾಖೆ ಉನ್ನಾತಾಧಿಕಾರಿಗಳಿಗೆ ನ್ಯಾಯಾಲಯಕ್ಕೆ ಸುಳ್ಳು ದೂರು ಸಲ್ಲಿಸಿದ ಕಾರಣ ರೈತರ ಮೇಲೆ ಕೇಸು ದಾಖಲು ಮಾಡಿದ್ದಾರೆ. ಕೂಡಲೇ ಆ ದೂರನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಫಾರಂ ನಂ.50, 53, 57ರಡಿ ಅರ್ಜಿ ಸಲ್ಲಿಸಿದ ಸುಮಾರು 1 ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ಕಂದಾಯ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಕೆಲವು ಅರಣ್ಯಾಧಿಕಾರಿಗಳು ನಕಲಿ ಪರಿಸರವಾದಿಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ದೊರೆಯದಂತೆ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ‌ ದೂರಿದ್ದಾರೆ.

ಈ ಸಂದರ್ಭದಲ್ಲಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್, ವಿರೇಶ್ ನಾಯ್ಕ್, ಪರಶುರಾಮಪ್ಪ, ಹನುಮಂತಪ್ಪ, ನಾಗರಾಜ್ ಕೆ. ಶಿಡ್ಲಿಹಳ್ಳಿ, ಬಸವರಾಜ್ ಶಿಡ್ಲಿಹಳ್ಳಿ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News