ಮೈಸೂರು: ದಸರಾ ಗಜಪಡೆಗೆ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ

Update: 2021-09-16 07:34 GMT

ಮೈಸೂರು, ಸೆ.16: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಿದರು.

ಅರಮನೆ ಆವರಣದ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 8:36ಕ್ಕೆ ಗಜಪಡೆಗೆ ಸಚಿವ ಸೋಮಶೇಖರ್ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು.

ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ ಎಂಟು ಆನೆಗಳು ಅರಮನೆ ಪ್ರವೇಶ ಮಾಡಿದವು. ಮಂಗಳ ವಾದ್ಯ, ಪೂರ್ಣ ಕುಂಭ ಸ್ವಾಗತದ ಮೂಲಕ ಆನೆಗಳನ್ನು ಬರಮಾಡಿಕೊಳ್ಳಲಾಯಿತು.

ನಂತರ ಮಾತನಾಡಿದ ಸಚಿವರು, ಅ.7ರಂದು ದಸರಾ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಅ.15ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಸೆ.23ರವರೆಗೆ ಅಧಿವೇಶನ ಇರುವುದರಿಂದ ದಸರಾ ಉದ್ಘಾಟನೆ ಯಾರಿಂದ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದರು.

ಅಧಿವೇಶನ ಮುಗಿದ ಬಳಿಕ ಪ್ರಮುಖರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ದಸರಾ ಉದ್ಘಾಟನೆಗೆ ಇನ್ನೂ ಯಾರ ಹೆಸರು ಅಂತಿಮಗೊಳಿಸಿಲ್ಲ ಎಂದು ಹೇಳಿದರು.

ದಸರಾ ಉದ್ಘಾಟನೆಗೆ ಗಣ್ಯರ ಆಯ್ಕೆಯನ್ನು ದಸರಾ ಉನ್ನತಾಧಿಕಾರ ಸಮಿತಿಯಲ್ಲಿ ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಸಂಬಂಧ ಯಾರಾದರೂ ಸಲಹೆ ಕೊಡಬಹುದು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಆಯ್ಕೆ ಮುಖ್ಯಮಂತ್ರಿ ಅವರಿಗೆ ಸೇರಿದ್ದು ಎಂದರು.

ದೇವಸ್ಥಾನ ತೆರವು ವಿಚಾರವಾಗಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಕುರಿತು ಸಚಿವ ಸಂಪುಟದಲ್ಲಿಟ್ಟು ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿ ಆದೇಶ ಮಾಡಲಾಗುವುದೆಂದು ಮುಖ್ಯಮಂತ್ರಿ ಹೇಳಿದ್ದಾರೆ. ದೇಗುಲ ತೆರವು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್‌.ಎ.ರಾಮದಾಸ್, ಎಲ್. ನಾಗೇಂದ್ರ,  ಮೇಯರ್ ಸುನಂದಾ ಪಾಲನೇತ್ರ, ನಿಗಮ ಮಂಡಳಿಗಳ ಅಧ್ಯಕ್ಷರಾದ  ಎಚ್.ವಿ‌.ರಾಜೀವ್, ಎಂ. ಶಿವಣ್ಣ, ಎನ್.ವಿ.ಫಣೀಶ್, ಎಲ್.ಆರ್.ಮಹದೇವಸ್ವಾಮಿ, ಎಂ.ಆರ್.ಕೃಷ್ಣಪ್ಪಗೌಡ, ಕಾ.ಪು.ಸಿದ್ದಲಿಂಗಸ್ವಾಮಿ, ಉಪಮೇಯರ್ ಅನ್ವರ್ ಬೇಗ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್‌ಪಿ ಆರ್.ಚೇತನ್,  ಜಿಪಂ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ,  ಡಿಸಿಎಫ್ ಕರಿಕಾಳನ್, ಎಡಿಸಿ ಡಾ. ಮಂಜುನಾಥಸ್ವಾಮಿ, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ, ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News