ವರದಿಗೆ ತೆರಳಿದ್ದ ಉರ್ದು ಪತ್ರಿಕೆ ವರದಿಗಾರನಿಗೆ ಹಲ್ಲೆ ನಡೆಸಿದ ಸಂಘ ಪರಿವಾರ ಕಾರ್ಯಕರ್ತರು

Update: 2021-09-16 09:17 GMT

ಮೈಸೂರು: ದೇವಸ್ಥಾನ ನೆಲಸಮ ಖಂಡಿಸಿ  ಹಿಂದೂಜಾಗರಣ ವೇದಿಕೆ ವತಿಯಿಂದ ನಡೆಸಲಾಗುತ್ತಿದ್ದ ಪ್ರತಿಭಟನೆ ವೇಳೆ ವರದಿಗಾಗಿ ತೆರಳಿದ್ದ ಉರ್ದು ಪತ್ರಿಕೆ ವರದಿಗಾರನ ಮೇಲೆ ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿನ ಆಧಿಶಕ್ತಿ ಶ್ರೀಮಹದೇವಮ್ಮ ದೇವಸ್ಥಾನ ನೆಲಸಮ ಮಾಡಿದ್ದನ್ನು ಖಂಡಿಸಿ ಗುರುವಾರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ  ಹಿಂದೂಜಾಗರಣ ವೇದಿಕೆ ಹಾಗೂ ಬಿಜೆಪಿ ಪಕ್ಷ ಕರೆ ನೀಡಿದ್ದ ಪ್ರತಿಭಟನೆ ವೇಳೆ ವರದಿಗಾಗಿ ಬಂದಿದ್ದ ಉರ್ದು ಪತ್ರಿಕೆಯ ದಿ.ಡೈಲಿ ಕೌಸರ್ ಪತ್ರಿಕೆ ಮುಖ್ಯ ಸಂಪಾದಕ  ಮಹಮದ್ ಸಫ್ತರ್ ಕೈಸರ್  ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್.ಎ.ರಾಮದಾಸ್ ಕಂಡು ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯರು ಬಿಜೆಪಿ ಪಕ್ಷದ ವಿರುದ್ಧವೇ ಧಿಕ್ಕಾರ ಕೂಗಿದರು.

ಈ ವೇಳೆ ವರದಿಮಾಡಲು ಮುಂದಾಗಿ ವೀಡಿಯೋ ಚಿತ್ರಿಕರಣ ಮಾಡುತ್ತಿದ್ದ ಉರ್ದು ಪತ್ರಿಕೆ ವರದಿಗಾರನ ಮೇಲೆ ಮುಗಿ ಬಿದ್ದು, ಹಲ್ಲೆ ಮಾಡಿ ವರದಿಗಾರನನ್ನು ಆ ಸ್ಥಳದಲ್ಲೇ ಹಿಡಿದು ಎಳೆದಾಡಿದ್ದಾರೆ.ತಕ್ಷಣ ಪೊಲೀಸರು ವರದಿಗಾರನನ್ನು ಬಿಡಿಸುವ ಪ್ರಯತ್ನ ಮಾಡಿದರೂ ಬಿಡದೆ ಹಲ್ಲೆ ನಡೆಸಿದ್ದಾರೆ.

ನಂತರ ಪೊಲೀಸರು ಅರಮನೆ ಕಟ್ಟಡದ ಒಳಗೆ ವರದಿಗಾರನನ್ನು ಕರೆದೊಯ್ದಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡನೆ: ಉರ್ದು ಪತ್ರಿಕೆ ವರದಿಗಾರನ ಮೇಲೆ ನಡೆದ ಹಲ್ಲೆಯನ್ನು ಮೈಸೂರು ಜಿಲ್ಲಾ ಪತ್ರಕರ್ತ ರ ಸಂಘ ತೀವ್ರವಾಗಿಖಂಡಿಸಿದೆ.

ಈ ಸಂಬಂಧ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು   ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಧಾರ್ಮಿಕ ಸಭೆ ಸಮಾರಂಭಗಳ ವೇಳೆ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News