ಜಿಲ್ಲಾಧಿಕಾರಿ, ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ವಿಹಿಂಪ ಮುಖಂಡ ಗಿರೀಶ್ ಭಾರದ್ವಾಜ್ ಆಗ್ರಹ

Update: 2021-09-16 11:59 GMT
ಗಿರೀಶ್ ಭಾರದ್ವಾಜ್ 

ಬೆಂಗಳೂರು, ಸೆ 16 : ನಂಜನಗೂಡು ತಾಲೂಕಿನ ಉಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಾಲಯ ಕೆಡವಿದ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ಹಾಗು ನಂಜನಗೂಡು ತಹಶೀಲ್ದಾರ್  ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥಮಾಡಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿರುವ ವಿಹಿಂಪ ಮುಖಂಡ ಗಿರೀಶ್ ಭಾರದ್ವಾಜ್ ಅವರು ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಮೈಸೂರು ಎಸ್ಪಿ ಆರ್. ಚೇತನ್ ಅವರನ್ನು ಆಗ್ರಹಿಸಿದ್ದಾರೆ. 

ಮಹದೇವಮ್ಮ ದೇವಾಲಯಕ್ಕೆ 500 ವರ್ಷಗಳ ಇತಿಹಾಸವಿದ್ದು ಅಲ್ಲಿ ಪ್ರತಿದಿನ ದೇವರ ಪೂಜೆ ನಡೆಯುತ್ತಿತ್ತು. ಆದರೆ ಸ್ಥಳೀಯರ ಭಾವನೆಗಳಿಗೆ ಯಾವುದೇ ಗೌರವ ನೀಡದ ತಹಸೀಲ್ದಾರ್ ಜನರು ಹಾಗು ಭಕ್ತಾದಿಗಳು ಪ್ರತಿಭಟಿಸಿ ತಡೆಯಬಾರದು ಎಂದು ಮುಂಜಾನೆಗೇ ಮೊದಲೇ ದೇವಾಲಯವನ್ನು ಕೆಡವಿದ್ದಾರೆ. ಕೆಡಹುವ ಮೊದಲು ಪವಿತ್ರ ಮೂರ್ತಿಗಳನ್ನೂ ಸರಿಯಾಗಿ ಸ್ಥಳಾಂತರ ಮಾಡಿಲ್ಲ. ಸ್ಥಳೀಯರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ತಹಸೀಲ್ದಾರ್ ದೇವಾಲಯವನ್ನು ಕೆಡವಿ ಭಕ್ತಾದಿಗಳ ಮನಸ್ಸಿಗೆ ಭಾರೀ ನೋವುಂಟು ಮಾಡಿದ್ದಾರೆ ಎಂದು ಗಿರೀಶ್ ಭಾರದ್ವಾಜ್ ಎಸ್ಪಿಗೆ ನೀಡಿದ ಮನವಿಯಲ್ಲಿ ದೂರಿದ್ದಾರೆ. 

ಸುಪ್ರೀಂ ಕೋರ್ಟ್ ಆದೇಶವನ್ನು ಮೈಸೂರು ಜಿಲ್ಲಾಧಿಕಾರಿ ಹಾಗು ತಹಸೀಲ್ದಾರ್ ಸರಿಯಾಗಿ ತಿಳಿದುಕೊಂಡಿಲ್ಲ. ಸೆಪ್ಟೆಂಬರ್ 29, 2009 ರ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಆರಾಧನಾಲಯಗಳು ನಿರ್ಮಾಣವಾಗಿರಬಾರದು . ಅದಕ್ಕಿಂತ ಮೊದಲು ನಿರ್ಮಾಣವಾಗಿರುವ ಆರಾಧನಾಲಯಗಳನ್ನು ಕೆಡಹುವ / ಸ್ಥಳಾಂತರ ಅಥವಾ ಸಕ್ರಮಗೊಳಿಸುವ  ಬಗ್ಗೆ ಸಂಬಂಧಪಟ್ಟ  ಅಧಿಕಾರಿಗಳು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಆದರೆ ಇದನ್ನು ತಿಳಿದುಕೊಳ್ಳದೆ ಜಿಲ್ಲಾಧಿಕಾರಿ ಹಾಗು ತಹಸೀಲ್ದಾರ್ ಏಕಾಏಕಿ ದೇವಾಲಯ ಕೆಡವಿದ್ದಾರೆ ಎಂದವರು ದೂರಿದ್ದಾರೆ. 

ಈ ದೇವಾಲಯ ರಸ್ತೆಗಿಂತ ೪೦ ಅಡಿ ದೂರದಲ್ಲಿದ್ದು ಇದರಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.  ೨೦೧೧ ರಲ್ಲೇ ಈ ದೇವಾಲಯ ೨೦೦ ವರ್ಷ ಹಳೆಯದು ಎಂದು ಆಗಿನ ತಹಸೀಲ್ದಾರ್ ಅದನ್ನು ಸಕ್ರಮಗೊಳಿಸಲು ಕ್ರಮ ಕೈಗೊಂಡಿದ್ದರು. ಆದರೆ ಈಗಿನ ಜಿಲ್ಲಾಧಿಕಾರಿ ಆ ವರದಿಯನ್ನು ತಿರಸ್ಕರಿಸಿ ದೇವಾಲಯ ಕೆಡವಲು ಆದೇಶ ನೀಡಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದು ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆಯಾಗಿದೆ. ಹಾಗಾಗಿ ಜಿಲ್ಲಾಧಿಕಾರಿ ಹಾಗು ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕೆಡವಲು ಸಹಕರಿಸಿದ ಇತರರನ್ನು ಬಂಧಿಸಬೇಕು ಎಂದು ಗಿರೀಶ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News