ಇಂಧನ ವಲಯ ಖಾಸಗಿಕರಣ ಪ್ರಸ್ತಾವ ಸರಕಾರದ ಮುಂದಿಲ್ಲ: ಸಚಿವ ವಿ.ಸುನಿಲ್ ಕುಮಾರ್ ಸ್ಪಷ್ಟನೆ

Update: 2021-09-16 12:45 GMT
ಸಚಿವ ವಿ.ಸುನಿಲ್ ಕುಮಾರ್

ಬೆಂಗಳೂರು,ಸೆ. 16: `ಇಂಧನ ವಲಯವನ್ನು ಖಾಸಗಿಕರಣ ಮಾಡುವ ಯಾವುದೇ ಪ್ರಸ್ತಾವ ಅಥವಾ ಚಿಂತನೆ ರಾಜ್ಯ ಸರಕಾರದ ಮುಂದಿಲ್ಲ. ಅಲ್ಲದೆ, ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ ಚಿಂತನೆಯನ್ನೂ ನಾವು ನಡೆಸಿಲ್ಲ' ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಯಶವಂತರಾಯಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೇಂದ್ರ ಸರಕಾರ ನೂತನ ಯೋಜನೆ ಆರ್‍ಡಿಎಸ್‍ಎಸ್ ಯೋಜನೆಯಡಿ ಪ್ರೀಪೇಯ್ಡ್ ಮೀಟರ್ ಅನ್ನು ಸರಕಾರಿ ಕಚೇರಿಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.

ಇಂಧನ ಇಲಾಖೆಗೆ ಒಟ್ಟು 5,792 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಬಾಕಿ ವಿವಿಧ ಇಲಾಖೆಗಳಿಂದ ವಿದ್ಯುತ್ ಬಿಲ್ ಬಾಕಿ ಬರಬೇಕಿದೆ. ಹೀಗಾಗಿ ಇಲಾಖೆಗೆ ಆದಾಯವೇ ಇಲ್ಲದಂತಾಗಿದೆ. ಹೀಗಾಗಿ ಸರಕಾರಿ ಕಚೇರಿಗಳಿಗೆ ಪ್ರೀಪೆಯ್ಡ್ ಮೀಟರ್ ಅಳವಡಿಕೆ ಉಪಕ್ರಮಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ತಾತ್ಕಾಲಿಕ ಸಂಪರ್ಕ ಪಡೆದು ಕಟ್ಟಡ ನಿರ್ಮಾಣ ಮಾಡುವವರಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸಲಾಗುತ್ತಿದೆ. ಅಲ್ಲದೆ, 27 ಅಮೃತನಗರಗಳಲ್ಲಿ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುವುದು ಎಂದು ಸುನೀಲ್ ಕುಮಾರ್ ಸದನಕ್ಕೆ ಮಾಹಿತಿ ನೀಡಿದರು.

ಉದ್ದಿಮೆದಾರರ ಸಭೆ: ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಒದಗಿಸಲು ಶೀಘ್ರದಲ್ಲೆ ಮುಖ್ಯಮಂತ್ರಿ ನೇತೃತ್ವದಲ್ಲಿ ಬಳಕೆದಾರರು ಮತ್ತು ಉದ್ದಿಮೆದಾರರ ಸಭೆ ಕರೆದು ಅವರಿಗೆ ತೊಂದರೆಯಾಗದಂತೆ ಮತ್ತು ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಯಶವಂತರಾಯಗೌಡ ಪಾಟೀಲ್, ರಾಜ್ಯದಲ್ಲಿ 400 ಮೆ.ವ್ಯಾ.ವಿದ್ಯುತ್ ಹೆಚ್ಚವರಿಯಾಗಿ ಉತ್ಪಾದನೆಯಾಗುತ್ತಿದ್ದು, ಅದನ್ನು ಹೊರ ರಾಜ್ಯದ ಉದ್ದಿಮೆಗಳಿಗೆ 2 ಅಥವಾ 3 ರೂ.ಗೆ ಯೂನಿಟ್‍ನಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ರಾಜ್ಯದ ಉದ್ದಿಮೆದಾರರಿಗೆ ಪ್ರತಿಯೂನಿಟ್‍ಗೆ 8ರಿಂದ 10 ರೂ. ದುಬಾರಿ ದರ ಹೆಚ್ಚಿಸಲಾಗುತ್ತಿದೆ. ಇದರಿಂದ ಕೈಗಾರಿಕೆಗಳು ಯಾವ ರೀತಿ ಬೆಳೆಯಲು ಸಾಧ್ಯ. ಕಡಿಮೆ ದರದಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News