ಮೂಡಿಗೆರೆ: ಹಿಂದೂಪರ ಸಂಘಟನೆಗಳಿಂದ ಪ್ರತಾಪ್‍ಸಿಂಹ, ತೇಜಸ್ವಿ ಸೂರ್ಯ ಕಾರು ಅಡ್ಡಗಟ್ಟಿ ಮುತ್ತಿಗೆ

Update: 2021-09-16 12:55 GMT

ಮೂಡಿಗೆರೆ, ಸೆ.16: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಅಧಿಕಾರದಲ್ಲಿದ್ದರೂ ಹಿಂದೂ ದೇವಾಲಯಗಳ ನೆಲಸಮ ಕಾರ್ಯ ನಡೆಯುತ್ತಿದೆ. ಅದನ್ನು ತಕ್ಷಣ ನಿಲ್ಲಿಸಬೇಕು. ರಾಜ್ಯದಲ್ಲಿ 4 ಸಾವಿರ ದೇವಾಲಯಗಳನ್ನು ನೆಲಸಮ ಮಾಡಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಅವರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ ಘಟನೆ ನಡೆಯಿತು.

ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಕಾರ್ಯಕ್ರಮದ ಬಳಿಕ ಪಟ್ಟಣದ ಬಿಜೆಪಿ ಕಚೇರಿಗೆ ತೆರಳುತ್ತಿದ್ದಾಗ ಚಿಕ್ಕಮಗಳೂರು, ಆಲ್ದೂರು, ಕಳಸ ಮತ್ತಿತರ ಕಡೆಗಳಿಂದ ಆಗಮಿಸಿದ್ದ ವಿಎಚ್‍ಪಿ, ಬಜರಂಗದಳದ ನೂರಾರು ಕಾರ್ಯಕರ್ತರು ಲಯನ್ಸ್ ವೃತ್ತದ ಬಳಿ ಸಂಸದರ ಕಾರನ್ನು ಅಡ್ಡಗಟ್ಟಿ ಮುತ್ತಿಗೆ ಹಾಕಿದರು. ಈ ವೇಳೆ ಇಬ್ಬರು ಸಂಸದರು ಸೇರಿದಂತೆ ಸರಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ವೇಳೆ ಪೊಲೀಸರು ಧರಣಿ ನಿರತರನ್ನು ನಿಯಂತ್ರಿಸಲು ಮುಂದಾದಾಗ ಸ್ಥಳದಲ್ಲಿ ನೂಕಾಟ, ತಳ್ಳಾಟ ನಡೆಯಿತು. ಈ ವೇಳೆ ಕಾರಿನಿಂದ ಕೆಳಗಿಳಿದ ಸಂಸದರು ಧರಣಿ ನಿರತರನ್ನು ಸಮಾಧಾನ ಪಡಿಸಲು ಮುಂದಾದರು. ಆದರೆ ಧರಣಿ ನಿರತರು ಇದಕ್ಕೆ ಸೊಪ್ಪು ಹಾಕದಿದ್ದಾಗ ಮಾತಿನ ಚಕಮಕಿಯೂ ನಡೆಯಿತು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ರಾಜ್ಯದಲ್ಲಿ 25ಮಂದಿ ಸಂಸದರಿದ್ದಾರೆ. ಆದರೂ ದೇವಸ್ಥಾನಗಳನ್ನು ಉಳಿಸಿಕೊಳ್ಳಲು ನಿಮಗೆ ತಾಕತ್ತಿಲ್ಲವೇ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಹಿಂದುತ್ವವೆನ್ನುವುದು ಪಕ್ಷಕ್ಕಿಂತ ಮಿಗಿಲಾದುದು. ನಾವು ರಾಜಕಾರಣಕ್ಕೆ ಬಂದಿರುವುದೇ ಹಿಂದುತ್ವದ ರಕ್ಷಣೆಗಾಗಿ. ಯಾವುದೇ ದೇವಸ್ಥಾನ ಹೊಡೆದುರುಳಿಸಲು ಅವಕಾಶ ನೀಡುವ ಪ್ರಶ್ನೆಯೇಇಲ್ಲ. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ 2018ರಲ್ಲಿ ನೆಲಸಮಗೊಳಿಸಬೇಕಾದ ದೇವಸ್ಥಾನಗಳ ಪಟ್ಟಿ ತಯಾರಿಸಲಾಗಿತ್ತು. ಈಗ ಅಧಿಕಾರಿಗಳು ನೆಲಸಮ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕೆಲ ಅಧಿಕಾರಿಗಳ ಬೇಜಬ್ದಾರಿತನದಿಂದಾಗಿ ಕೆಲವು ದೇವಾಲಯಗಳನ್ನು ಉರುಳಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿಯಾವುದೇದೇವಸ್ಥಾನಒಡೆಯಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಈ ಬಗ್ಗೆ ಧೃತಿಗೆಡಬೇಕಿಲ್ಲ. ಹಿಂದುತ್ವದ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಬದ್ದವಾಗಿದೆ ಎಂದು ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿದರು.

ಇದೇ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ ರಾಜ್ಯದಲ್ಲಿ 4 ಸಾವಿರ ದೇವಾಲಯಗಳ ನೆಲಸಮ ಮಾಡಲು ನೊಟೀಸ್ ನೀಡಲಾಗಿತ್ತು. ಅದಕ್ಕೆ ಸದ್ಯ ಕಡಿವಾಣ ಹಾಕಲಾಗಿದೆ. ಮೈಸೂರಿನಲ್ಲಿ ಹಿಂದೂ ದೇವಾಲಯಗಳಯ ನೆಲಸಮಗೊಳಿಸಿದಾಗ ತಕ್ಕ ರೀತಿಯಲ್ಲಿ ಉತ್ತರ ನೀಡಲಾಗಿದೆ. ತಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ ಬಳಿಕ ದೇವಸ್ಥಾನ ನೆಲಸಮ ನಿರ್ಧಾರವನ್ನು ಅವರು ಕೈಬಿಟ್ಟಿದ್ದಾರೆ. ಹಿಂದುತ್ವಕ್ಕೆ ಧಕ್ಕೆ ಬಂದಾಗ ಕೈ ಕಟ್ಟಿ ಕುಳಿತುಕೊಳ್ಳುವುದು ಸಾಧ್ಯವಿಲ್ಲ.ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕೆರದು ಚರ್ಚಿಸಲಾಗುವುದು. ಕೇಂದ್ರ ಮತ್ತು ರಾಜ್ಯ ¸ರಕಾರಗಳೊಂದಿಗೆ ಚರ್ಚಿಸಿ ಸುಪ್ರೀಂಕೋರ್ಟಿನ ಆದೇಶಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಸ್ಪಷ್ಟನೆ ನೀಡಿದರು.

ಈ ವೇಳೆ ಪ್ರತಿಭಟನಾಕಾರರು ಸಂಸದರಿಗೆ ಮನವಿ ಸಲ್ಲಿಸಿದರು. ವಿಎಚ್‍ಪಿ ತಾಲೂಕು ಅಧ್ಯಕ್ಷ ಮಹೇಶ್ ಸಾಲುಮರ, ಸಿ.ಡಿ.ಶಿವಕುಮಾರ್, ಅಜಿತ್ ಕಳಸ, ಮಧು, ಪ್ರಶಾಂತ್, ಅಜಿತ್ ಆಲ್ದೂರು ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News