5 ಸಾವಿರ ಶಿಕ್ಷಕರ ನೇಮಕ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-09-16 13:01 GMT
ಸಚಿವ ಬಿ.ಸಿ.ನಾಗೇಶ್  

ಬೆಂಗಳೂರು, ಸೆ. 16: `ಕೋವಿಡ್ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಸಕ್ತ ಸಾಲಿನಲ್ಲಿ ಶೇ.100ಕ್ಕೆ ನೂರರಷ್ಟು ಬಂದಿರುವುದರಿಂದ ಕಾಲೇಜುಗಳಲ್ಲಿ ಹೆಚ್ಚುವರಿ ವರ್ಗ(ಸೆಕ್ಷನ್)ಗಳನ್ನು ತೆರೆಯಲು ಈಗಾಗಲೇ ಅನುಮತಿ ನೀಡಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ದೇವಾನಂದ್ ಫುಲಸಿಂಗ್ ಚೌಹಾಣ್ ಪ್ರಶ್ನೆಗೆ ಉತ್ತರಿಸಿದ ಅವರು, ಐದು ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದು, ಶಿಕ್ಷಕರ ನೇಮಕವನ್ನು ಟಿಇಇ ಮೂಲಕ ಮಾಡಿಕೊಳ್ಳುತ್ತೇವೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.

 ಕಾಂಗ್ರೆಸ್ ಸದಸ್ಯ ಎಸ್.ಎನ್. ಸುಬ್ಬಾರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಈ ಬಾರಿ ಎಸೆಸೆಲ್ಸಿಯಲ್ಲಿ 100ಕ್ಕೆ ನೂರು ಫಲಿತಾಂಶವನ್ನು ಪ್ರಕಟಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಹೆಚ್ಚಾಗಿದೆ' ಎಂದು ಹೇಳಿದರು.

`ಒಂದು ವಿಭಾಗದಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ ಎರಡು ವರ್ಗಗಳನ್ನು ತೆರೆಯಲು ಅನುಮತಿ ನೀಡಿದ್ದೇವೆ. ಒಂದು ವರ್ಗದಲ್ಲಿ 50 ವಿದ್ಯಾರ್ಥಿಗಳು ಮಾತ್ರ ಇರಬೇಕು. ರಾಜ್ಯದಲ್ಲಿ 361 ಕಾಲೇಜುಗಳ ಅವಶ್ಯಕತೆಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳ ಸಮಾಲೋಚನೆ ನಡೆಸಿ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರಕಾರ ಬದ್ಧವಿದೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News