'ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ' ವಿಧಾನಸಭೆಯಲ್ಲಿ ಮಂಡನೆ

Update: 2021-09-16 15:41 GMT

ಬೆಂಗಳೂರು, ಸೆ. 16: `ವಿಶೇಷ ಚೇತನ ಮಕ್ಕಳಿರುವ, 50 ವರ್ಷ ವಯಸ್ಸಾಗಿರುವ ಮಹಿಳೆ, 55ವರ್ಷ ವಯಸ್ಸಿನ ಪುರುಷ, ಅವಲಂಬಿತ ಮಕ್ಕಳಿರುವ ವಿಚ್ಛೇದಿತ, ಗರ್ಭಿಣಿ, ವಿಧುರ ಶಿಕ್ಷಕರು ತಾಲೂಕು ಅಥವಾ ಜಿಲ್ಲೆ ಹೊರಗಡೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಒಂದು ಅವಧಿಗೆ ವರ್ಗಾವಣೆಗೆ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸುವ `ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2021' ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಗುರುವಾರ ವಿಧಾನಸಭೆ ಶಾಸಕ ರಚನಾ ಕಲಾಪದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ವಿಧೇಯಕವನ್ನು ಮಂಡಿಸಿದರು. 2017ರ ಕಾಯ್ದೆ ನಿಯಮಗಳ ಅನ್ವಯ 2019ರಲ್ಲಿ ಶಿಕ್ಷಕರ ವರ್ಗಾವಣೆ ನಡೆಸಿದ್ದು, ಮೇಲ್ಕಂಡ ಶಿಕ್ಷಕರನ್ನು ಪರಿಗಣಿಸಿರಲಿಲ್ಲ. ಆದುದರಿಂದ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆ ಮೇಲೆ ಅಥವಾ ಸಮರ್ಪಕ ಮರು ಹಂಚಿಕೆಯ ತರುವಾಯ ವರ್ಗಾವಣೆಗೆ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆ ಹೊರಗೆ ವರ್ಗಾವಣೆಯಾದ ಶಿಕ್ಷಕನಿಗೆ ತಾಲೂಕು ಅಥವಾ ಜಿಲ್ಲೆ ಒಳಗೆ ನಿಯುಕ್ತಿ ಪ್ರಯೋಜನವನ್ನು ನೀಡಲು ಈ ವಿಧೇಯಕ ಮಂಡಿಸಲಾಗಿದೆ ಎಂದು ತಿಳಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನ ಇಲ್ಲದಿರುವ ಕಾರಣ ಮೇಲಿನ ಉದ್ದೇಶವನ್ನು ಸಾಧಿಸಲು `ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2021' ಅಧ್ಯಾದೇಶ ತರಲಾಗಿತ್ತು. ಇದೀಗ ಅಧ್ಯಾದೇಶದ ಬದಲಿಗೆ ಈ ವಿಧೇಯಕವನ್ನು ತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News