ಸರಕಾರಿ ಗೌರವಗಳೊಂದಿಗೆ ಆಸ್ಕರ್ ಫೆರ್ನಾಂಡಿಸ್ ಅಂತ್ಯಕ್ರಿಯೆ

Update: 2021-09-16 14:52 GMT

ಬೆಂಗಳೂರು, ಸೆ.16: ಇಹಲೋಕ ತ್ಯಜಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ಗುರುವಾರ ಬೆಂಗಳೂರಿನ ಅಶೋಕ ನಗರದ ಸೇಂಟ್ ಪ್ಯಾಟ್ರಿಕ್ ಚರ್ಚ್ ಆವರಣದಲ್ಲಿ ಕ್ರೈಸ್ತ ಧರ್ಮದ ವಿಧಿವಿಧಾನಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಎಐಸಿಸಿ ನಾಯಕ ರಾಹುಲ್‍ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಆಸ್ಕರ್ ಪತ್ನಿ ಬ್ಲಾಸಂ ಫೆರ್ನಾಂಡಿಸ್, ಪುತ್ರ ಓಶಾನ್ ಫೆರ್ನಾಂಡಿಸ್, ಪುತ್ರಿ ಓಶೀನ್ ಫೆರ್ನಾಂಡಿಸ್ ಸೇರಿದಂತೆ ಕುಟುಂಬ ವರ್ಗ, ವಿವಿಧ ಕ್ಷೇತ್ರಗಳ ಗಣ್ಯರು, ಆಸ್ಕರ್ ಅವರ ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಅಗಲಿದ ನಾಯಕನಿಗೆ ಅಂತಿಮ ವಿದಾಯ ಸಲ್ಲಿಸಿದರು.

ಮಂಗಳೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ ಸುಮಾರಿಗೆ ಆಸ್ಕರ್ ಅವರ ಪಾರ್ಥಿವ ಶರೀರವನ್ನು ತಂದು ಗುರುವಾರ ಮಧ್ಯಾಹ್ನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಲ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತದನಂತರ, ಅಲ್ಲಿಂದ ಅಂತಿಮ ಯಾತ್ರೆಯ ವಾಹನದಲ್ಲಿ ಅಶೋಕ ನಗರದ ಸೇಂಟ್ ಪ್ಯಾಟ್ರಿಕ್ ಚರ್ಚ್‍ಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತಂದು ಕ್ರೈಸ್ತ ಧರ್ಮಗುರು ಬಿಷಪ್ ಹೆನ್ರಿ ಇತರೆ ಧರ್ಮಗುರುಗಳಿಂದ ಪ್ರಾರ್ಥನೆ, ಅಂತಿಮ ವಿಧಿವಿಧಾನಗಳನ್ನು ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸೋಮವಾರ ನಿಧನ: ಮನೆಯಲ್ಲಿಯೇ ವ್ಯಾಯಾಮ ಮಾಡುವಾಗ ಕುಸಿದು ತೀವ್ರವಾಗಿ ಗಾಯಗೊಂಡಿದ್ದ ಆಸ್ಕರ್ ಫೆರ್ನಾಂಡಿಸ್ ಅವರನ್ನು ಹಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕಳೆದ ಸೋಮವಾರ ಆಸ್ಪತ್ರೆಯಲ್ಲೇ ನಿಧನರಾಗಿದ್ದರು.

ಅಜಾತಶತ್ರು ಆಸ್ಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷಾತೀತವಾಗಿ ದೇಶಾದ್ಯಂತ ಗಣ್ಯರು ಸಂತಾಪ ಸೂಚಿಸಿದ್ದರು.

ಪ್ರಾರ್ಥನೆಯಲ್ಲಿ ಗಣ್ಯರು ಭಾಗಿ

ಚರ್ಚ್‍ನಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಆಸ್ಕರ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಬೆಂಗಳೂರಿನ ಕ್ರೈಸ್ತ ಧರ್ಮ ಪ್ರಾಂತದ ಗುರುಗಳು, ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆಸ್ಕರ್ ಅವರ ಪುತ್ರಿ ಓಶೀನ್ ಶ್ರದ್ಧಾಂಜಲಿ ನುಡಿನಮನಗಳನ್ನು ಅರ್ಪಿಸಿದರು.

ನಂತರ ಧರ್ಮಗುರುಗಳು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಅಂತಿಮ ಪ್ರಾರ್ಥನೆ ಸಲ್ಲಿಸಿ ಪಾರ್ಥಿವ ಶರೀರದ ಮೇಲೆ ತೀರ್ಥ ಪ್ರೇಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ರಾಹುಲ್‍ಗಾಂಧಿ ಸೇರಿದಂತೆ ಕಾಂಗ್ರೆಸ್ ಅನೇಕ ಗಣ್ಯರು ಅಂತ್ಯಸಂಸ್ಕಾರದ ಕೊನೆ ಕ್ಷಣದವರೆಗೂ ಸ್ಥಳದಲ್ಲಿದ್ದು ಅಗಲಿದ ನಾಯಕರಿಗೆ ಅಂತಿಮ ವಿದಾಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News