ಮೂರು ವರ್ಷದಲ್ಲಿ 27 ಲಾಕಪ್‍ಡೆತ್: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-09-16 15:03 GMT

ಬೆಂಗಳೂರು, ಸೆ.16: ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ 27 ಲಾಕಪ್‍ಡೆತ್ ಪ್ರಕರಣಗಳು ಸಂಭವಿಸಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 6 ಹಾಗೂ 2021ರಲ್ಲಿ 10 ಲಾಕಪ್‍ಡೆತ್ ಪ್ರಕರಣಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಇತ್ತೀಚೆಗೆ ಪೊಲೀಸರ ಹಿಂಸೆ ಮತ್ತು ದೌರ್ಜನ್ಯದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆ. ಲಾಕಪ್‍ಡೆತ್ ಪ್ರಕರಣ ಸಂಭವಿಸಿದ 24 ಗಂಟೆಯೊಳಗೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ನೀಡಿ ಮುಂದಿನ ಸೂಚನೆಗಳನ್ನು ಮತ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಪೊಲೀಸರ ಹಿಂಸೆ ಮತ್ತು ದೌರ್ಜನ್ಯದಿಂದ ಲಾಕಪ್‍ಡೆತ್ ಪ್ರಕರಣಗಳು ವರದಿಯಾದಲ್ಲಿ ಸಂಬಂಧಿಸಿದ ಪೊಲೀಸರನ್ನು ಬಂಧಿಸಿ ಸಾಮಾನ್ಯರಂತೆ ವಿಚಾರಣೆ ನಡೆಸಲಾಗುತ್ತದೆ. ಲಾಕಪ್‍ಡೆತ್ ಸಂಬಂಧ ಸಿಓಡಿ ಮೂಲಕ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿನ 1054 ಪೊಲೀಸ್ ಠಾಣೆಗಳಲ್ಲಿ 857 ಪೊಲೀಸ್ ಠಾಣೆಗಳನ್ನು ಆಧುನೀಕರಣ ಯೋಜನೆಯಡಿ 774 ಠಾಣೆಗಳಿಗೆ ಸಿಸಿಟಿವಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಬಾಕಿ ಇರುವ 197 ಪೊಲೀಸ್ ಠಾಣೆಗಳಿಗೆ ಅತಿ ಶೀಘ್ರದಲ್ಲೇ ಸಿಸಿ ಟಿವಿ ಅಳವಡಿಸಲಾಗುವುದು. ಸಿಸಿಟಿವಿ ಅಳವಡಿಸುವ ಸಂಬಂಧ ರಾಜ್ಯ ಮಟ್ಟದ ಮೇಲುಸ್ತುವಾರಿ ಸಮಿತಿ ಮತ್ತು ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News