`ಅನ್ನಭಾಗ್ಯ ಯೋಜನೆ ಘೋಷಿಸಿ ಹಣವನ್ನೇ ಮೀಸಲಿಟ್ಟಿರಲಿಲ್ಲ': ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆರೋಪ

Update: 2021-09-16 15:16 GMT

ಬೆಂಗಳೂರು, ಸೆ. 16: `ಅನ್ನಭಾಗ್ಯ ಯೋಜನೆಯಡಿ ಬಡವರು ಹಸಿವಿನಿಂದ ಇರಬಾರದು ಎಂದು ನಾನೇ ಏಳು ಕೆಜಿ ಅಕ್ಕಿ ಕೊಟ್ಟಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಆದರೆ, ಅವರು ಘೋಷಿಸಿದ ಯೋಜನೆಗೆ ಹಣವನ್ನೇ ಮೀಸಲಿಟ್ಟಿರಲಿಲ್ಲ. ಆದರೆ, ನಾನು ಸಿಎಂ ಆದ ಬಳಿಕ ಅದಕ್ಕೆ ಹಣ ಹೊಂದಿಸಿಕೊಟ್ಟೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬೆಲೆ ಏರಿಕೆ ವಿಷಯದ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ತಮ್ಮ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ನಡೆದ ಅಕ್ಕಿಭಾಗ್ಯದ ಅಸಲಿ ಕಥೆಯನ್ನು ಬಿಚ್ಚಿಟ್ಟರು. ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರು ದೊಡ್ಡ ಹುಯಿಲೆಬ್ಬಿಸಿದರು. ಐದು ಕೆಜಿ ಬದಲು ಏಳು ಕೆಜಿಯನ್ನೇ ಕೊಡಬೇಕೆಂದು ಹಠಕ್ಕೆ ಬಿದ್ದರು. ಆದರೆ, ಹಣಕಾಸು ಲಭ್ಯತೆ ನೋಡಿದರೆ ಕೇವಲ 5 ಕೆಜಿ ಅಕ್ಕಿಗೆ ಮಾತ್ರ ಹಣ ತೆಗೆದಿರಿಸಲಾಗಿತ್ತು ಎಂದು ಉಲ್ಲೇಖಿಸಿದರು.

`ಉಳಿದ ಎರಡು ಕೆಜಿ ಅಕ್ಕಿಗೆ ಹಣ ಎಲ್ಲಿಂದ ತರಬೇಕು? ಚುನಾವಣೆಗೆ ಹೋಗುವ ಮುನ್ನ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಐದು ಕೆಜಿ ಅಕ್ಕಿಗಷ್ಟೇ ಹಣ ಮೀಸಲಿಟ್ಟು ಹೋಗಿದ್ದರು. ಸಮ್ಮಿಶ್ರ ಸರಕಾರ ಬಂದಾಗ ಇದೇ ಜನ ಏಳು ಕೆಜಿ ಅಕ್ಕಿ ಕೊಡಬೇಕೆಂದು ಪಟ್ಟು ಹಿಡಿದರು. ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಮಾಡಿದ ಕೆಲಸಕ್ಕೆ ನಮ್ಮನ್ನು ಟೀಕೆ ಮಾಡುವಂತಾಯಿತು ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ಈ ಸತ್ಯ ನಮಗೂ ಗೊತ್ತಿರಲಿಲ್ಲ. ಇದೀಗ ರಾಜ್ಯದ ಜನರಿಗೆ ನೀವು ಹೇಳಿದ್ದರಿಂದ ಗೊತ್ತಾಗುವಂತೆ ಆಯಿತು ಎಂದು ಪ್ರತಿಕ್ರಿಯಿಸಿದರು. ಇದೇ ರೀತಿಯಲ್ಲಿ ಸಿದ್ದರಾಮಯ್ಯ ಘೋಷಿಸಿದ್ದ `ಅನಿಲ ಭಾಗ್ಯ' ಯೋಜನೆಯ ಕಥೆಯೂ ಆಗಿದೆ ಎಂದು ಕುಮಾರಸ್ವಾಮಿ ಪ್ರಸ್ತಾಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News