ಐಎಂಎ ವಂಚನೆ ಪ್ರಕರಣ: ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರಿಗಳ ನೇಮಕ; ಹೈಕೋರ್ಟ್ ಗೆ ಮೆಮೊ ಸಲ್ಲಿಕೆ

Update: 2021-09-16 15:50 GMT

ಬೆಂಗಳೂರು, ಸೆ.16: ಐ ಮಾನಿಟರಿ ಅಡೈ ಸರಿ(ಐಎಂಎ) ವಂಚನೆ ಪ್ರಕರಣ ಸಂಬಂಧ ರಚಿಸಲಾದ ಸಕ್ಷಮ ಪ್ರಾಧಿಕಾರಕ್ಕೆ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸರಕಾರವು ಹೈಕೋರ್ಟ್ ಗೆ ಮೆಮೊ ಸಲ್ಲಿಸಿದೆ.

ಜತೆಗೆ, ಸಹಾಯಕ ಆಯುಕ್ತ ಮತ್ತು ವಿಶೇಷ ಅಧಿಕಾರಿ ಹುದ್ದೆಗೆ ವರ್ಗಾಯಿಸಿರುವ ಕೆಎಎಸ್ ಅಧಿಕಾರಿ ಅಬಿದ್ ಗಡ್ಯಾಳ್ ಅವರು ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಂಡಿಲ್ಲ. ಹೀಗಾಗಿ, ಅವರ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇಲಾಖಾ ತನಿಖೆಗೆ ಆದೇಶಿಸಿದೆ ಎಂದು ರಾಜ್ಯ ಸರಕಾರವು ಪೀಠಕ್ಕೆ ಮೆಮೊ ಸಲ್ಲಿಸಿದೆ. ಅಲ್ಲದೆ, ಸಕ್ಷಮ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಆರ್.ಶಿಲ್ಪಾ ಅವರನ್ನು ಸೆ.15ರಂದು ನೇಮಕ ಮಾಡಿರುವುದಾಗಿ ಮೆಮೊದಲ್ಲಿ ತಿಳಿಸಿದೆ. 

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹೂಡಿಕೆದಾರರಾದ ಇಮ್ರಾನ್ ಪಾಷಾ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಿದ್ದ ವಕೀಲರು, ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮಾಜಿ ಸಚಿವ ಆರ್.ರೋಷನ್ ಬೇಗ್ ಅವರ ವಿಚಾರಣೆಯೂ ಸೇರಿದಂತೆ ಒಟ್ಟಾರೆ ಇದುವರೆಗೆ ನಡೆಸಲಾಗಿರುವ ತನಿಖೆಗೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಸೂಚಿಸಿತ್ತು. ವರದಿ ಸಿದ್ಧವಾಗಿದೆ. ಕಾರಣಾಂತರಗಳಿಂದ ವರದಿ ಸಲ್ಲಿಸಲು ಆಗಿಲ್ಲ. ಶೀಘ್ರದಲ್ಲಿಯೇ ರಿಜಿಸ್ಟಾರ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗುವುದು. ಈ ವರದಿಯನ್ನು ಯಾರೊಂದಿಗೂ ಹಂಚಿಕೊಳ್ಳಲಾಗದು ಎಂದು ಪೀಠಕ್ಕೆ ತಿಳಿಸಿದರು.

ರಾಜ್ಯ ಸರಕಾರದ ಪರ ವಕೀಲರು ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಮನವಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಅವುಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ಕಾಲಾವಕಾಶ ಬೇಕಿದೆ. ಈಗಷ್ಟೇ ವಿಶೇಷ ನ್ಯಾಯಾಲಯವು ಸುಸಜ್ಜಿತವಾಗಿ ಪ್ರಕರಣವನ್ನು ಆಲಿಸಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಸದರಿ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಒಪ್ಪಿದ ಪೀಠವು ರಾಜ್ಯ ಸರಕಾರದ ವಕೀಲರು ವಸ್ತುಸ್ಥಿತಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ವಿಶೇಷ ನ್ಯಾಯಾಲಯವು ಕಾರ್ಯಾರಂಭ ಮಾಡಿದ್ದು, ಈ ನ್ಯಾಯಾಲಯವು ತುರ್ತಾಗಿ ಪ್ರಕರಣಗಳ ವಿಚಾರಣೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ಈಗಾಗಲೇ ಆದೇಶಿಸಿದೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಪೀಠವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News