`ಖಾಲಿ ಚೀಲ ಪ್ರದರ್ಶಿಸಿ' ಜಿಲ್ಲಾಧಿಕಾರಿ ಭ್ರಷ್ಟಾಚಾರದ ವಿರುದ್ಧ ಆಕ್ರೋಶ: ತನಿಖೆಗೆ ಶಾಸಕ ಸಾ.ರಾ.ಮಹೇಶ್ ಒತ್ತಾಯ

Update: 2021-09-16 17:31 GMT

ಬೆಂಗಳೂರು, ಸೆ. 16: `ಕೋವಿಡ್ ಸಂಕಷ್ಟದ ಅವಧಿಯಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸುತ್ತದೆ. ನಮ್ಮ ನಾಯಕ ಕುಮಾರಸ್ವಾಮಿಯವರು ಸರಕಾರಕ್ಕೆ ಸಹಕಾರ ನೀಡಿದ್ದಾರೆ. ಆದರೆ, ಕೆಲ ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದೆ' ಎಂದು ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಹೆಸರು ಉಲ್ಲೇಖಿಸದೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ವಿಧಾನಸಭೆಯಲ್ಲಿ ಬೆಲೆ ಏರಿಕೆ ವಿಚಾರದ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸಾ.ರಾ.ಮಹೇಶ್, `ತಮ್ಮ ಜೇಬಿನಲ್ಲಿದ್ದ ಬಟ್ಟೆಯ ಖಾಲಿಚೀಲವನ್ನು ಪ್ರದರ್ಶಿಸಿ ಕೇವಲ ನಾಲ್ಕೈದು ರೂ.ಗಳ ಬೆಲೆ ಈ ಬ್ಯಾಗ್ ಅನ್ನು 69 ರೂ.ನೀಡಿ ಒಟ್ಟು 15 ಲಕ್ಷ ಬ್ಯಾಗ್ ಖರೀದಿಸಿದ್ದು, ಇದೊಂದರಲ್ಲೇ 6.50 ಕೋಟಿ ರೂ.ಲೂಟಿ ಮಾಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

`20ರಿಂದ 40 ವರ್ಷದೊಳಗಿನ ಮಹಿಳಾ ಅಧಿಕಾರಿಗಳು ಇದ್ದರೆ ನಮ್ಮವರೇ ನಮಗೆ ಖಳನಾಯಕರಾಗುತ್ತಾರೆ. ಮಹಿಳಾ ಅಧಿಕಾರಿ ಎನ್ನುವುದು ಕೆಲವರಿಗೆ ಅನುಕೂಲ' ಎಂದು ತಮ್ಮ ಅಳಲು ತೋಡಿಕೊಂಡ ಮಹೇಶ್, `ಕೆಎಎಸ್ ಸಹಿತ ಸಣ್ಣಪುಟ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಐಟಿ, ಎಸಿಬಿ, ಲೋಕಾಯುಕ್ತ ಒಬ್ಬೆ ಒಬ್ಬ ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಏಕೆ ದಾಳಿ ಮಾಡುವುದಿಲ್ಲ' ಎಂದು ಕೇಳಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, `ಸರಕಾರಿ ಅಧಿಕಾರಿ ಶಾಸಕರ ಮೇಲೆ ಮಾಧ್ಯಮಗಳ ಎದುರು ಹೋಗಿದ್ದು ಏಕೆ? ಇವರಿಗೆ ಆ ಅಧಿಕಾರ ಯಾರು ಕೊಟ್ಟಿದ್ದು? ಅವರ ಆಕ್ಷೇಪಗಳೇನೇ ಇದ್ದರೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, `ಈ ಕುರಿತು ನಾನು ಮುಖ್ಯ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಸರಕಾರಿ ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ' ಎಂದರು. ಬಳಿಕ ಮಾತು ಮುಂದುವರಿಸಿದ ಕುಮಾರಸ್ವಾಮಿ, `ಅಧಿಕಾರಿಗಳ ನಡುವಿನ ಜಟಾಪಟಿ ಇತ್ಯರ್ಥಕ್ಕೆ ಮುಖ್ಯ ಕಾರ್ಯದರ್ಶಿ ಅವರನ್ನು ತಮ್ಮ ಬಳಿ ಕರೆಸಿಕೊಳ್ಳಬೇಕು. ಆದರೆ, ಅವರೇ ಅವರ ಬಳಿಗೆ ಹೋಗುವುದು ಎಷ್ಟು ಸರಿ?' ಎಂದು ಟೀಕಿಸಿದರು.

ನಂತರ ಮಾತನಾಡಿದ ಸಾ.ರಾ.ಮಹೇಶ್, ಭ್ರಷ್ಟ ಅಧಿಕಾರಿಗಳ 500 ಕೋಟಿ ರೂ., ಒಂದು ಸಾವಿರ ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಆಸ್ತಿಗಳನ್ನು ಆಂಧ್ರ, ಉತ್ತರ ಪ್ರದೇಶಗಳಲ್ಲಿ ಮಾಡಿದ್ದಾರೆ. ಇವರೇ ನಮ್ಮ ವಿರುದ್ಧ ಚುನಾವಣೆಗೆ ಬಂದು ನಿಲ್ಲುತ್ತಾರೆ. ಇಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವ ತಾಕತ್ತು ಸರಕಾರಕ್ಕೆ ಇದೆಯೇ ಎಂದು ಕೇಳಿದರು.

ಇದಕ್ಕೆ ಸರಕಾರದ ಪರವಾಗಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ್, ಸಾ.ರಾ.ಮಹೇಶ್ ಈಗಾಗಲೇ ತಮ್ಮ ಹಕ್ಕುಚ್ಯುತಿ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು, ಈ ಬಗ್ಗೆ ವಿಷಯ ಚರ್ಚೆಗೆ ಬಂದಾಗ ಸರಕಾರ ಉತ್ತರ ನೀಡಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News